ಶೌರ್ಯ ತಂಡದ ಸದಸ್ಯರು ಉತ್ತಮ ರೀತಿಯಲ್ಲಿ ಸಮಾಜಸೇವೆ ಸಲ್ಲಿಸುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ವಿಪತ್ತು ಸಂಭವಿಸಿದಾಗ ತಕ್ಷಣ ಸ್ಪಂದಿಸುವ ಮೂಲಕ ಜನರ ನೆರವಿಗೆ ಧಾವಿಸುತ್ತಿದ್ದಾರೆ.
ಸಿದ್ದಾಪುರ: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ. ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವ ಸ್ವಯಂಸೇವಕರು ನಿರಂತರ ತರಬೇತಿ ಪಡೆದು ವಿಪತ್ತಿನ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ಮಂಜುಳಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಶಿರಸಿ ಮತ್ತು ಸಿದ್ದಾಪುರ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ ಇವರ ಸಹಯೋಗದಲ್ಲಿ ತಾಲೂಕಿನ ಶಂಕರ ಮಠದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶೌರ್ಯ ತಂಡದ ಸದಸ್ಯರು ಉತ್ತಮ ರೀತಿಯಲ್ಲಿ ಸಮಾಜಸೇವೆ ಸಲ್ಲಿಸುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ವಿಪತ್ತು ಸಂಭವಿಸಿದಾಗ ತಕ್ಷಣ ಸ್ಪಂದಿಸುವ ಮೂಲಕ ಜನರ ನೆರವಿಗೆ ಧಾವಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯವಾಗಿದೆ. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಯೋಧರಂತೆ ಸ್ಥಳೀಯ ಮಟ್ಟದಲ್ಲಿ ಸೇವೆ ಸಲ್ಲಿಸುವುದು ಹೆಮ್ಮೆಯ ವಿಷಯವಾಗಿದೆ. ಎಷ್ಟೇ ಅನುಭವ ಮತ್ತು ಪರಿಣತಿ ಇದ್ದರೂ ನಿರಂತರ ತರಬೇತಿ ಅತ್ಯಗತ್ಯ ಎಂದರು.
ಪೊಲೀಸ್ ಉಪನಿರೀಕ್ಷಕ ನಾಗಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ವರ್ಷಗಳಿಂದ ಸಾಮಾಜಿಕ ಸೇವೆ, ಬಡವರ ನೆರವು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ವಿಪತ್ತು ನಿರ್ವಹಣೆಯಂತಹ ಮಹತ್ವದ ಕ್ಷೇತ್ರದಲ್ಲಿಯೂ ಗ್ರಾಮಮಟ್ಟದಲ್ಲಿ ಶೌರ್ಯ ತಂಡಗಳನ್ನು ರಚಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಎನ್ಡಿಆರ್ಎಫ್ ವಿಭಾಗದ ಕ್ಯಾಪ್ಟನ್ ವಿನೋದ್ ಕುಮಾರ್, ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಮಾತನಾಡಿದರು. ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜಯವಂತ್ ಪಟಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ಯೋಜನಾಧಿಕಾರಿ ರಾಘವೇಂದ್ರ ಯು. ಸ್ವಾಗತಿಸಿದರು. ಸಿದ್ದಾಪುರ ವಲಯದ ಮೇಲ್ವಿಚಾರಕ ಗಿರೀಶ್ ವಂದಿಸಿದರು. ಜನಜಾಗೃತಿ ವೇದಿಕೆಯ ಮೇಲ್ವಿಚಾರಕ ಉದಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಯೋಜನಾಧಿಕಾರಿ ಮಂಜುನಾಥ ನಾಯಕ್, ಶೌರ್ಯ ತಂಡದ ಕ್ಯಾಪ್ಟನ್ ಹಾಗೂ ಮಾಸ್ಟರ್ಗಳಾದ ಮಂಜುನಾಥ, ಚಂದ್ರಶೇಖರ, ಶಿಲ್ಪಾ ಮತ್ತು ರಾಜೇಶ್ ಅವರು ಶುಭ ಹಾರೈಸಿದರು. ಸಿದ್ದಾಪುರ ತಾಲೂಕಿನ 2026-27ನೇ ಸಾಲಿನ ಶೌರ್ಯ ಘಟಕದ ಕ್ಯಾಪ್ಟನ್ ಆಗಿ ಯಶ್ವಂತ್ ನಾಯಕ್ ಹಾಗೂ ಮಾಸ್ಟರ್ ಆಗಿ ವಸಂತ್ ನಾಯಕ್ ಆಯ್ಕೆಯಾದರು. ಶಿರಸಿ ತಾಲೂಕಿನ 2026- 27ನೇ ಸಾಲಿನ ಶಬರಿ ಘಟಕದ ಕ್ಯಾಪ್ಟನ್ ಆಗಿ ಮಮತಾ ಕೋಡುಕಣೆ ಹಾಗೂ ಮಾಸ್ಟರ್ ಆಗಿ ಅಣ್ಣಪ್ಪ ಆಯ್ಕೆಯಾದರು.