ಜನತೆಯ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು: ನಾಗನಗೌಡ

| Published : Sep 29 2024, 01:56 AM IST

ಸಾರಾಂಶ

ಇಂದು ನಾವು ಆರೋಗ್ಯದಿಂದ ಇರುವುದಕ್ಕೆ ಪೌರ ಕಾರ್ಮಿಕರು ಪ್ರಮುಖವಾಗಿ ಕಾರಣರಾಗಿದ್ದಾರೆ.

ಸಂಡೂರು: ಪೌರ ಕಾರ್ಮಿಕರು ಜನತೆ ಏಳುವುದಕ್ಕೆ ಮುಂಚೆ ಎದ್ದು ನಗರವನ್ನು ಸ್ವಚ್ಛಗೊಳಿಸಿ ಊರನ್ನು ಸುಂದರವಾಗಿಡುವುದಲ್ಲದೆ, ಜನತೆಯ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಬಿಕೆಜಿ ಕಂಪನಿಯ ಮಾಲೀಕ ಬಿ.ನಾಗನಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಬಿಕೆಜಿ ಕಂಪನಿಯ ಕಚೇರಿ ಆವರಣದಲ್ಲಿ ಬಿಕೆಜಿ ಹದ್ದಿನಪಡೆ ಐರನ್ ಓರ್ ಮೈನ್ಸ್ ಹಾಗೂ ಇಂಡಿಯನ್ ಬ್ಯೂರೊ ಆಫ್ ಮೈನ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹಿ ಸೇವಾ, ಸಫಾಯಿ ಮಿತ್ರ ಶಿಬಿರದಲ್ಲಿ ಪುರಸಭೆಯ ೮೫ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಅವರಿಗೆ ಕುಕ್ಕರ್‌ಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡಿದರು.

ಇಂದು ನಾವು ಆರೋಗ್ಯದಿಂದ ಇರುವುದಕ್ಕೆ ಪೌರ ಕಾರ್ಮಿಕರು ಪ್ರಮುಖವಾಗಿ ಕಾರಣರಾಗಿದ್ದಾರೆ. ಕೊರೋನ ಹಾವಳಿಯ ಸಂದರ್ಭದಲ್ಲಿ ಪೌರ ಕಾರ್ಮಿಕರು ಜನರ ಆರೋಗ್ಯ ರಕ್ಷಣೆ, ಕೊರೋನ ನಿಯಂತ್ರಣ ಕಾರ್ಯದಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸಿದರು. ಬಿಕೆಜಿ ಕಂಪನಿಯು ನಗರದ ಸ್ವಚ್ಛತೆಗಾಗಿ ಪುರಸಭೆಗೆ ಕಸ ಸಂಗ್ರಹ ಡಬ್ಬಿಗಳು, ಸ್ವಚ್ಛತಾ ಪರಿಕರಗಳು ಹಾಗೂ ಬೀದಿ ದೀಪಗಳನ್ನು ನೀಡಿದೆ. ಸಂಡೂರು ಸೇರಿದಂತೆ ಜಿಲ್ಲೆಯ ವಿವಿದೆಡೆ ಗಿಡಮರಗಳ ರಕ್ಷಣೆಗಾಗಿ ಟ್ರೀಗಾರ್ಡ್ಗಳನ್ನು ಒದಗಿಸಿದೆ. ಪುರಸಭೆಯ ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಬಿಕೆಜಿ ಕಂಪನಿ ಅಗತ್ಯ ನೆರವನ್ನು ನೀಡುವುದಾಗಿ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ ಮಾತನಾಡಿ, ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮನೆಗಳಲ್ಲಿಯೇ ಹಸಿರು ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ, ಪುರಸಭೆಯ ಕಸ ಸಂಗ್ರಹ ವಾಹನಗಳಲ್ಲಿ ಹಾಕಿದರೆ, ಹಸಿ ಮತ್ತು ಒಣ ಕಸವನ್ನು ಗೊಬ್ಬರ ಮತ್ತಿತರ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದರು.

ಪುರಸಭೆಯ ಪರಿಸರ ಅಧಿಕಾರಿ ಅನ್ನಪೂರ್ಣ ಹಾಗೂ ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಶ್ರೀನಿವಾಸರಾವ್ ಅವರು ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಿದರು. ಬಿಕೆಜಿ ಕಂಪನಿಯ ಡಿಜಿಎಂ ಪ್ರಮೋದ್ ರಿತ್ತಿ ಸ್ವಾಗತಿಸಿದರು. ಪಿಎಂ. ಅಜಯ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ವಂದಿಸಿದರು. ಬಿಕೆಜಿ ಕಂಪನಿಯ ಅಧಿಕಾರಿಗಳಾದ ಷಣ್ಮುಖ, ಗೋಪಾಲ್, ಶಿವಮೂರ್ತಿಸ್ವಾಮಿ ಸೋವೇನಹಳ್ಳಿ, ಸಿಬ್ಬಂದಿ ಉಪಸ್ಥಿತರಿದ್ದರು.