ಸಾರಾಂಶ
- ಹರಿಹರ ಗುರು ಭವನದಲ್ಲಿ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹರಿಹರ
ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಗುರು ಭವನದಲ್ಲಿ ನಗರಸಭೆ ಹರಿಹರ ಮತ್ತು ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಾದ್ಯಂತ ದಿನನಿತ್ಯ ಎಸೆಯುವ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡುವ ಕಾರ್ಯ ತುಂಬ ಕ್ಲಿಷ್ಟವಾಗಿದೆ. ಹಲವಾರು ದಿನ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಿರ್ವಹಿಸದೇ ಇದ್ದರೆ ಸಾರ್ವಜನಿಕರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಪ್ರತಿಯೊಬ್ಬರೂ ತಾವು ಬಳಸುವ ತ್ಯಾಜ್ಯವನ್ನು ರಸ್ತೆ, ಖಾಲಿ ಜಾಗ ಮತ್ತು ಎಲ್ಲೆಂದರಲ್ಲಿ ಬಿಸಾಡದೇ ನಗರಸಭೆ ಕಸ ಸಂಗ್ರಹಿಸುವ ಗಾಡಿಗಳಿಗೆ ನೀಡಬೇಕು. ಆಗ ಮಾತ್ರ ನಗರವನ್ನು ಸ್ವಚ್ಛ, ಸುಂದರವಾಗಿ ರೂಪಿಸಲು ಸಾಧ್ಯ. ನಗರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಈಗಾಗಲೇ ಪೌರಾಡಳಿತ ಸಚಿವರಿಗೆ ಪೌರಕಾರ್ಮಿಕರನ್ನು ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರು ಇಂದು ತಮ್ಮ ಪೌರಕಾರ್ಮಿಕರ ದಿನ ಆಚರಿಸಿಕೊಳ್ಳುತ್ತಿರುವುದು ಹರ್ಷದಾಯಕ ಸಂಗತಿ. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ತಾವು ಹಲವಾರು ಕ್ರೀಡೆಗಳಲ್ಲಿ ಸ್ಪರ್ಧಿಸಿ, ಪ್ರತಿಭೆ ಮೆರೆದು ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ನಗರಸಭೆ ಉಪಾಧ್ಯಕ್ಷ ಎಂ.ಜಂಬಣ್ಣ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಆದ್ಯತೆ ನೀಡಿ ಜನತೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪೌರಕಾರ್ಮಿಕರು ನಗರಸಭೆಯಿಂದ ನೀಡುವ ಸುರಕ್ಷತಾ ಸಲಕರಣೆಗಳನ್ನು ತಪ್ಪದೇ ಬಳಸಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಸಲಹೆ ನೀಡಿದರು.ಪೌರಾಯುಕ್ತ ಸುಬ್ರಹ್ಮಣ್ಯಂ ಶೆಟ್ಟಿ ಮಾತನಾಡಿ, ಕೋವಿಡ್ ಹಾವಳಿ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆ ಇಡೀ ದೇಶವೇ ಮೆಚ್ಚಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಮನೆಯಲ್ಲಿ ಇದ್ದರೆ ಅವರ ಆರೋಗ್ಯ ಕಾಪಾಡಲು ಪೌರಕಾರ್ಮಿಕರು ಅವಿರತವಾಗಿ ಶ್ರಮಿಸಿದರು ಎಂದರು.
ಕ್ರಿಕೆಟ್, ಹಗ್ಗ ಜಗ್ಗಾಟ, ರಿಂಗ್ ಎಸೆತ, ಲೆಮನ್ ಸ್ಪೂನ್, ಶಾಟ್ ಪುಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿ ವಿತರಿಸಲಾಯಿತು. ಹಲವು ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.ಪೌರಕಾರ್ಮಿಕರ ಸಂಘದ ಉಚ್ಚಂಗಪ್ಪ, ಪರಸಪ್ಪ, ಸದಾಶಿವ, ನಗರಸಭಾ ಮ್ಯಾನೇಜರ್ ನಿರಂಜನಿ, ಕಂದಾಯ ನಿರೀಕ್ಷಕ ರಮೇಶ್, ಆರೋಗ್ಯ ಇಲಾಖೆಯ ರವಿಪ್ರಕಾಶ್, ಸಂತೋಷ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು. ಪ್ರಾರ್ಥನೆ ನಾಗರತ್ನ, ನಿರೂಪಣೆ ಶಿಕ್ಷಕರಾದ ರೇವಣ್ಣ ನಾಯಕ್, ಸ್ವಾಗತ ಜಿ.ಕೆ. ಪ್ರವೀಣ್ ನೆರವೇರಿಸಿದರು.
- - -ಕೋಟ್ಸ್ ಕಾರ್ಮಿಕರ ವಿಶ್ರಾಂತಿಗಾಗಿ ನಗರಸಭಾ ಆವರಣದಲ್ಲಿ ವಿಶ್ರಾಂತಿ ಗೃಹ ನಿರ್ಮಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು. ಸಮಾಜದ ಸ್ವಾಸ್ಥ್ಯ ಕಾಪಾಡುವವರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು
- ಸುಬ್ರಹ್ಮಣ್ಯ ಶೆಟ್ಟಿ, ಪೌರಾಯುಕ್ತಕಳೆದ ಹಲವು ವರ್ಷಗಳಿಂದ ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ನಿವೇಶನದ ಅಗತ್ಯವಿದೆ. ಶಾಸಕರಾದ ಬಿ.ಪಿ. ಹರೀಶ್ ನಗರಸಭೆಗೆ ಸೇರಿದ ಜಾಗದಲ್ಲಿ ಪೌರಕಾರ್ಮಿಕರಿಗೆ ನಿವೇಶನ ಸೌಲಭ್ಯ ಒದಗಿಸಿ ಕೊಡಬೇಕು
- ಆಟೋ ಹನುಮಂತಪ್ಪ, ಸದಸ್ಯ, ನಗರಸಭೆ- - - -23ಎಚ್‍ಆರ್‍ಆರ್1:
ಹರಿಹರದ ಗುರು ಭವನದಲ್ಲಿ ಹರಿಹರ ನಗರಸಭೆ ಮತ್ತು ರಾಜ್ಯ ಪೌರ ನೌಕರರ ಸೇವಾ ಸಂಘ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಪೌರಕಾರ್ಮಿಕರಿಗೆ ಸನ್ಮಾನ ನೆರವೇರಿಸಿದರು.