ಸಾರಾಂಶ
ಚನ್ನಪಟ್ಟಣ: ಶೈಕ್ಷಣಿಕ ಸುಧಾರಣೆ, ಶಿಕ್ಷಕರ ಜ್ಞಾನಾಭಿವೃದ್ಧಿ, ಇಲಾಖೆ ಕಾರ್ಯಕ್ರಮ, ಸಮಾಲೋಚನೆ ಮತ್ತಿತರ ಮಹತ್ವದ ಉದ್ದೇಶ ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಬಹಳ ಮಹತ್ವದ್ದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ತಿಳಿಸಿದರು.
ತಾಲೂಕಿನ ವಿರುಪಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವೀಕೃತಗೊಂಡ ಸಿಂಗರಾಜಿಪುರ ಕ್ಲಸ್ಟರ್ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ನಿಯಮಗಳಲ್ಲಿ ಪ್ರತೀ ಕ್ಲಸ್ಟರ್‌ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರ ಇದೆ. ಇಲ್ಲಿ ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು, ತರಗತಿ ಪ್ರಕ್ರಿಯೆಯ ನಾವೀನ್ಯತೆಗಳನ್ನು ಕಲಿಯುವ ಸ್ಥಳವಾಗಿಸಿಕೊಳ್ಳಲಾಗುತ್ತದೆ. ಈ ಕೇಂದ್ರಗಳು ಪ್ರಸ್ತುತ ಇಲಾಖೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಕ್ರಿಯಾಶೀಲವಾಗಿಲ್ಲ. ಕೆಲವು ಕಡೆ ಕಟ್ಟಡದ ಕೊರತೆ, ಇನ್ನು ಕೆಲವೆಡೆ ಸ್ಥಳದ ಕೊರತೆಯಿದೆ ಎಂದರು.ಸಿಂಗರಾಜಿಪುರ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ವೈದ್ಯರಾಜು ಅವರು ಸ್ವಂತ ಹಣ ಮತ್ತು ತಮ್ಮ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ಸಹಾಯ ಪಡೆದು, ಸಮೂಹ ಸಂಪನ್ಮೂಲ ಕೇಂದ್ರವನ್ನು ಪುನಃಶ್ಚೇತನಗೊಳಿಸಿದ್ದಾರೆ. ಈ ರೀತಿ ಎಲ್ಲ ಸಿಆರ್‌ಪಿಗಳು ಆಸಕ್ತಿ ತೋರಿದರೆ ಶೈಕ್ಷಣಿಕ ಸುಧಾರಣೆ ಸಾಧ್ಯ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ಕ್ಲಸ್ಟರ್, ಕೇಂದ್ರದಲ್ಲಿ ಸರಕಾರದ ಸುತ್ತೋಲೆಗಳು, ಗ್ರಂಥಾಲಯ ಪುಸ್ತಕಗಳು, ಶಿಕ್ಷಕರ ಕೈಪಿಡಿ, ಮಕ್ಕಳ ಕೈಪಿಡಿ, ಸರಕಾರದ ನಿಯಮಾವಳಿಗಳು, ಜ್ಞಾನವನ್ನು ಹೆಚ್ಚಿಸುವ ಆಟಗಳು, ಶಿಕ್ಷಕರ ತರಗತಿ ಪ್ರಕ್ರಿಯೆ ಸರಳಗೊಳಿಸುವ ಪುಸ್ತಕಗಳು, ಕ್ಲಸ್ಟರ್‌ನ ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿದೆ. ಶಿಕ್ಷಕರಿಗೆ ಸುಂದರ ಸಮೂಹ ಸಂಪನ್ಮೂಲ ಕೇಂದ್ರ ಇದಾಗಿದೆ. ಇದು ಶಿಕ್ಷಕರ ಸವಾಲುಗಳನ್ನು ಸರಳಗೊಳಿಸಿ ಪರಿಹಾರ ಕಂಡುಕೊಳ್ಳುವ ಕೇಂದ್ರವಾಗಲಿ ಎಂದರು.ಸಮೂಹ ಸಂಪನ್ಮೂಲ ವ್ಯಕ್ತಿ ವೈದ್ಯರಾಜು ಮಾತನಾಡಿ, ಸಂಪನ್ಮೂಲ ವ್ಯಕ್ತಿಯಾಗಿ ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದೇನೆ. ಸರ್ಕಾರಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನೆರವಾಗಿದ್ದೇನೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಇದೇ ವೇಳೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೈದ್ಯರಾಜು ಅವರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು. ಶಿಕ್ಷಣ ಸಂಯೋಜಕಿ ರಾಜಲಕ್ಷ್ಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಷ್ಪ, ಸಿಂಗರಾಜಿಪುರ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲ, ಭೂಹಳ್ಳಿ ಮುಖ್ಯ ಶಿಕ್ಷಕಿ ಕೌಶಲ್ಯಕರಿಯಪ್ಪ, ಪೀಹಳ್ಳಿ ದೊಡ್ಡಿ ಶಾಲೆಯ ಮುಖ್ಯ ಶಿಕ್ಷಕ ಶಿವರಾಜು, ಅರಳಾಳುಸಂದ್ರ ಶಾಲೆಯ ಸಂಪನ್ಮೂಲ ಶಿಕ್ಷಕ ಬಿ. ವಿ.ಹಳ್ಳಿ ಸುರೇಶ್, ಶಿಕ್ಷಕರಾದ ಅಪ್ಪಾಜಿ, ಸಂಜೀವಕುಮಾರ್, ನಾಗೇಗೌಡ, ಉಮಾ, ಸುಮಾ, ಮಾಲತಿ ಇತರರಿದ್ದರು.ಪೊಟೋ೧೭ಸಿಪಿಟಿ೨: ತಾಲೂಕಿನ ವಿರುಪಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವೀಕೃತಗೊಂಡ ಸಿಂಗರಾಜಿಪುರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡವನ್ನು ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಉದ್ಘಾಟಿಸಿದರು.