Former DCC Bank Director Bapugouda Patil said that cooperative societies play a key role in the economic development of the common people.
ಹುಣಸಗಿ: ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಾಪುಗೌಡ ಪಾಟೀಲ್ ಹೇಳಿದರು.
ಪಟ್ಟಣದ ಮಕರಂದ ಹೋಟೆಲ್ ಸಭಾಂಗಣದಲ್ಲಿ ಜನಸ್ನೇಹಿ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತ, ಹುಣಸಗಿ ವತಿಯಿಂದ ಹಮ್ಮಿಕೊಂಡಿದ್ದ 6ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿ, ಸದಸ್ಯರ ವಿಶ್ವಾಸ ಹಾಗೂ ಸಹಕಾರದಿಂದ ಸಂಘಗಳು ಪ್ರಗತಿ ಸಾಧಿಸಲು ಸಾಧ್ಯ. ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಸದೃಢವಾಗಬೇಕು. ಇದಕ್ಕೆ ನಿರ್ದೇಶಕರು ಸಹಕಾರ ನೀಡುವುದು ಅಷ್ಟೇ ಅವಶ್ಯಕ ಎಂದರು.ಗುಳಬಾಳ ರಾಮಲಿಂಗೇಶ್ವರ ಮಠದ ಪೂಜ್ಯ ಮರಿಹುಚ್ಚೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಹಕಾರದ ತತ್ವಗಳನ್ನು ಅಳವಡಿಸಿಕೊಂಡು ಸಂಘದ ಸದಸ್ಯರು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ಸಂಘಗಳು ನೆರವಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಆಶೀರ್ವದಿಸಿದರು.
ಸಹಕಾರಿ ಧುರೀಣ ಸಿದ್ದನಗೌಡ ಕಣಗಿನಾಳ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಸಂಘದ ಕಾರ್ಯನಿರ್ವಾಹಕ ಮಹಾಂತೇಶ ಮುರಾಳ ಅವರು ವಾರ್ಷಿಕ ವರದಿ ವಾಚಿಸಿದರು. ಬಳಿಕ ಸಂಘದ ಕಳೆದ ಸಾಲಿನ ಕಾರ್ಯಚಟುವಟಿಕೆಗಳು, ಆರ್ಥಿಕ ವ್ಯವಹಾರಗಳು, ಸದಸ್ಯರಿಗೆ ನೀಡಿದ ವಿವಿಧ ಸೇವೆಗಳು ಹಾಗೂ ಮುಂದಿನ ಸಾಲಿನ ಯೋಜನೆಗಳ ಕುರಿತು ಸಭೆಗೆ ವಿವರಿಸಿದರು. ಪ್ರಕಾಶ ಅಂಗಡಿ, ವಿಜಯಕುಮಾರ್ ದೇಸಾಯಿ, ರಾಮನಗೌಡ, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಾಗನಗೌಡ ಪಾಟೀಲ್ ಸ್ವಾಗತಿಸಿದರು. ಶಿಕ್ಷಕಿ ಶಿವಲೀಲಾ ಮುರಾಳ ಪ್ರಾರ್ಥಿಸಿದರು. ಮಶಾಕ ಯಾಳಗಿ ವಂದಿಸಿದರು.