ಸಾರಾಂಶ
ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ವೃದ್ಧಿಸುವಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಶ್ಲಾಘನೀಯ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ವೃದ್ಧಿಸುವಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಶ್ಲಾಘನೀಯ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಸಾಕ್ಷಿಬೀಡು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಕ್ಷಿಬೀಡು ಕೆರೆ ಅಭಿವೃದ್ಧಿ ಸಮಿತಿಯಿಂದ ಪುನಃಶ್ಚೇತನಗೊಂಡ 7779ನೇ ಕೆರೆ ನಾಮಫಲಕ ಅನಾವರಣಗೊಳಿಸಿ, ಕೆರೆಯನ್ನು ಗ್ರಾಪಂಗೆ ಹಸ್ತಾಂತರಿಸಿ ಮಾತನಾಡಿದರು.
ಪೂರ್ವಜರ ಕಾಲದಲ್ಲಿ ತೆರೆದ ಬಾವಿ, ಮಗನ ಕಾಲಕ್ಕೆ ಕೊಳವೆಬಾವಿಗಳು ಬಂದಿವೆ. ಅಂತರ್ಜಲ ಸಂರಕ್ಷಣೆ ಮಾಡದಿದ್ದರೆ ನಮ್ಮ ಮೊಮ್ಮಕ್ಕಳ ಕಾಲಕ್ಕೆ ಖಾಲಿ ಬಾವಿಗಳನ್ನು ನೋಡಬೇಕಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭೂಮಿ ಮೇಲೆ ನೀರಿನ ಪ್ರಮಾಣ ಕ್ಷೀಣಿಸಿ ಬರಡು ಭೂಮಂಡಲ ಸೃಷ್ಟಿಯಾಗಿ ಎಲ್ಲಾ ಜೀವ ಸಂತತಿಗಳು ನಶಿಸಿ ಹೋಗುತ್ತವೆ ಎಂದು ಎಚ್ಚರಿಸಿದರು.ಸಮಾಜದಲ್ಲಿ ನಾವೆಲ್ಲರೂ ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ. ಇದರ ಪರಿಣಾಮ ಪ್ರಕೃತಿಯಲ್ಲಿ ಹಲವು ಬದಲಾವಣೆ ಕಾಣುತ್ತಿದ್ದೇವೆ. ಸರ್ಕಾರಕ್ಕೆ ಸಹಕಾರಿಯಾಗಿ ಉತ್ತಮ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ. ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರಬೇಕು ಎಂದರು.
ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿತಾಯ್ ಮಾತನಾಡಿ, ಕೆರೆಗಳು ಗ್ರಾಮೀಣ ರೈತರ ಜೀವನಾಡಿ. ಅವುಗಳನ್ನು ಉಳಿಸಿಕೊಂಡರೆ ಸಮೃದ್ಧಿ ಎಂಬ ಆಶಯದಿಂದ ಕೆರೆಗಳ ಪುನಃಶ್ಚೇತನ ಮಾಡುವ ಯೋಜನೆಯಡಿ ಸಾಕ್ಷೀಬೀಡು ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.ಗ್ರಾಮೀಣ ಜನ ನೆಮ್ಮದಿಯಿಂದ ಬದುಕಬೇಕಾದರೆ ನಾವು ನಮ್ಮ ಊರಿನಲ್ಲಿರುವ ನಮ್ಮ ಕೆರೆಗಳನ್ನು ಶುಚಿಯಾಗಿಟ್ಟುಕೊಂಡು ಕಾಪಾಡಬೇಕು. ಕೆರೆ ಸಂಸ್ಕೃತಿ ಉಳಿಸಿಕೊಂಡಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಭವಿಷ್ಯವನ್ನು ರಕ್ಷಿಸಿಕೊಳ್ಳಬಹುದು ಎಂದರು.
ಈ ವೇಳೆ ಕೆರೆಯನ್ನು ಹಸ್ತಾಂತರ ಮಾಡಲಾಯಿತು. ಜಿಲ್ಲಾ ಜನ ಜಾಗೃತಿ ಮಾಜಿ ಅಧ್ಯಕ್ಷ ಜಯರಾಮ್ ತೊಟ್ಟಿ, ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಜಿಲ್ಲಾ ಜನ ಜಾಗೃತಿ ನಿರ್ದೇಶಕ ಎ.ಆರ್.ರಘು, ಬಿರುವಳ್ಳಿ ಗ್ರಾಪಂ ಅಧ್ಯಕ್ಷೆ ಎಂ.ಜಿ.ಸುಜಾತ. ಸದಸ್ಯ ಎಸ್.ಎನ್.ಮಂಜೇಗೌಡ, ಗ್ರಾಮಭಿವೃದ್ಧಿ ಯೋಜನಾಧಿಕಾರಿ ತಿಲಕ್‌ರಾಜ್, ಕಿಕ್ಕೇರಿ ಯೋಜನಾ ಅಧಿಕಾರಿ ವಿರೇಶಪ್ಪ, ಕೆರೆ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಕೀಲ ನವೀನ್ ಕುಮಾರ್, ಕೆರೆ ಸಮಿತಿ ಉಪಾಧ್ಯಕ್ಷ ಎಸ್.ಎನ್.ಜವರೇಗೌಡ, ಕಾರ್ಯದರ್ಶಿ ಮಂಜೇಗೌಡ, ಸದಸ್ಯ ಪ್ರಭುದೇವೇಗೌಡ, ಮೇಲ್ವಿಚಾರಕರಾದ ಶಿಲ್ಪಾ, ಮಂಜುನಾಥ್, ಟಿ.ಎನ್.ರಘು ಸೇರಿದಂತೆ ಸೇವಾಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.