ಉತ್ತರ ಕನ್ನಡ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ಶ್ವಾನದಳ ಮಹತ್ವದ ಪಾತ್ರ ವಹಿಸುತ್ತಿದೆ.
ಅಪರಾಧ ಪತ್ತೆ, ಸ್ಫೋಟಕ ಹಾಗೂ ಮಾದಕ ವಸ್ತುಗಳ ಪತ್ತೆ ಕಾರ್ಯಾಚರಣೆಗಳಲ್ಲಿ ದಕ್ಷತೆಯಿಂದ ಸೇವೆ
ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ಶ್ವಾನದಳ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರಸ್ತುತ ಶ್ವಾನದಳದಲ್ಲಿ ಲ್ಯಾಬ್ರಡಾರ್ ರಿಟ್ರೈವರ್, ಡಾಬರ್‌ಮನ್ ಪಿಂಚರ್ ಹಾಗೂ ಬೆಲ್ಜಿಯನ್ ಮಲಿನೋಸ್ ತಳಿಯ ಒಟ್ಟು ಆರು ಶ್ವಾನಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅಪರಾಧ ಪತ್ತೆ, ಸ್ಫೋಟಕ ಹಾಗೂ ಮಾದಕ ವಸ್ತುಗಳ ಪತ್ತೆ ಕಾರ್ಯಾಚರಣೆಗಳಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿವೆ.ಸ್ಫೋಟಕ ಪತ್ತೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ನಿ, ಟೈನಿ ಹಾಗೂ ಮಾರ್ವೆಲ್ ಶ್ವಾನಗಳು ಜಿಲ್ಲೆಯ ಪ್ರಮುಖ ಭದ್ರತಾ ತಾಣಗಳಲ್ಲಿ ತಪಾಸಣೆ ನಡೆಸುತ್ತಿವೆ. ಲ್ಯಾಬ್ರಡಾರ್ ತಳಿಯ ಅನ್ನಿ 96ಕ್ಕೂ ಹೆಚ್ಚು ಸ್ಫೋಟಕ ಪತ್ತೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದು, 2023ರ ಪಶ್ಚಿಮ ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಟೈನಿ 2024ರಲ್ಲಿ ಪ್ರಥಮ ಹಾಗೂ ಮಾರ್ವೆಲ್ 2025ರಲ್ಲಿ ತೃತೀಯ ಸ್ಥಾನ ಗಳಿಸಿ ಶ್ವಾನದಳದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಕೈಗಾ ಅಣುಸ್ಥಾವರ, ಕದ್ರಾ ಮತ್ತು ಕೊಡಸಳ್ಳಿ ಅಣೆಕಟ್ಟುಗಳು ಸೇರಿದಂತೆ ನ್ಯಾಯಾಲಯ ಸಂಕೀರ್ಣಗಳಲ್ಲಿ ಈ ಶ್ವಾನಗಳು ನಿರಂತರ ತಪಾಸಣೆ ನಡೆಸುತ್ತಿವೆ.ಕೊಲೆ, ದರೋಡೆ ಹಾಗೂ ಕಳ್ಳತನದಂತಹ ಗಂಭೀರ ಪ್ರಕರಣಗಳ ತನಿಖೆಯಲ್ಲಿ ಡಾಬರ್‌ಮನ್ ಪಿಂಚರ್ ತಳಿಯ ಅಕಿರಾ ಮತ್ತು ಕಾಳಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅಕಿರಾ ಈಗಾಗಲೇ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗವಹಿಸಿದ್ದು, 2025ರ ಪಶ್ಚಿಮ ವಲಯ ಮಟ್ಟದ ಕರ್ತವ್ಯಕೂಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚುವಲ್ಲಿ ಅಕಿರಾ ಮಹತ್ವದ ಪಾತ್ರ ನಿರ್ವಹಿಸಿತ್ತು. ಕಾಳಿ ಕೂಡ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತನ್ನ ಕಾರ್ಯಕ್ಷಮತೆ ತೋರಿದೆ.ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ವಿಶೇಷ ತರಬೇತಿ ಪಡೆದಿರುವ ಸುಭಾ ಶ್ವಾನ ಜಿಲ್ಲೆಯಾದ್ಯಂತ ಗಾಂಜಾ, ಅಫೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಜುಲೈ 2026ರಲ್ಲಿ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಾದಕ ವಸ್ತು ಪತ್ತೆ ಕಾರ್ಯಾಚರಣೆಯಲ್ಲೂ ಸುಭಾ ಗಮನಾರ್ಹ ಪಾತ್ರ ವಹಿಸಿತ್ತು. ಪ್ರವಾಸಿ ತಾಣಗಳು, ಕಾರವಾರ ಬಂದರು ಹಾಗೂ ಕಾರಾಗೃಹಗಳಲ್ಲಿ ನಿಯಮಿತ ತಪಾಸಣೆ ನಡೆಸುವ ಮೂಲಕ ಮಾದಕ ವಸ್ತುಗಳ ಸಾಗಾಟಕ್ಕೆ ತಡೆ ನೀಡುವ ಕಾರ್ಯದಲ್ಲಿ ಈ ಶ್ವಾನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.ದಕ್ಷ ತರಬೇತುದಾರರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಶ್ವಾನದಳವು ಅಪರಾಧ ಪತ್ತೆ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಜನರ ಸುರಕ್ಷತೆಗೆ ತನ್ನ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ.