ಸಾರಾಂಶ
ಮರಿಯಮ್ಮನಹಳ್ಳಿ: ಉತ್ತಮ ಸಮಾಜ ನಿರ್ಮಾಣದಲ್ಲಿ ನಾಟಕಗಳ ಪಾತ್ರ ಮಹತ್ವದಾಗಿದೆ ಎಂದು ಕೆಪಿಸಿಸಿ ಸದಸ್ಯ, ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.ಇಲ್ಲಿನ ದುರ್ಗಾದಾಸ್ ರಂಗಮಂದಿರದಲ್ಲಿ ರಂಗಚೌಕಿ ಕಲಾ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ ಪ್ರದರ್ಶನ ಎಂದರೆ ಅದು ಕೇವಲ ಮನರಂಜನೆಯಲ್ಲ. ಸಮಾಜದ ನ್ಯೂನತೆಗಳನ್ನು ಕಲಾವಿದರು ತಮ್ಮ ಕಲೆಯ ಮೂಲಕ ತಿದ್ದುತ್ತಾರೆ. ರಂಗಭೂಮಿ ಕಲೆ ಉಳಿಸಿ ಬೆಳಸಲು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದರು.ಸಾಹಿತಿ ಪಿ.ಪೀರ್ ಬಾಷಾ ಮಾತನಾಡಿ, ರಂಗಭೂಮಿ ಪರಂಪರೆಗೆ ದೊಡ್ಡ ಆಳವಾದ ಬೇರುಗಳಿವೆ. ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹೊಸ ಹೊಸ ಹೂವುಗಳನ್ನು ಅರಳಿಸುತ್ತಾ ಹೋದರೆ ಸಾಕು ಬೇರುಗಳು ತಾನುತಾನಾಗಿಯೇ ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ಅವರು ಹೇಳಿದರು.
ನಾಟಕ ನೋಡುಗರಿಗೆ ಯಮೋಷನಲ್ ಮಾಡದೇ, ತಿಳಿವಳಿಕೆ ನೀಡುತ್ತಾ, ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ನಾಟಕ ನೋಡುತ್ತಾ ವಾಸ್ತವಕ್ಕೆ, ವರ್ತಮಾನಕ್ಕೆ ಬರಬೇಕು ಎನ್ನುವ ರೀತಿಯಲ್ಲಿ ಹೊಸ ಅಲೆಯ ನಾಟಕಗಳು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ರಂಗ ನಿರ್ದೇಶಕ ಬಿ.ಎಂ.ಎಸ್. ಪ್ರಭು, ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಮಾತನಾಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಿರಿಯ ಕಲಾವಿದೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಕೆ.ಮಂಜುನಾಥ, ಶ್ರೀರಾಂಪುರ ದುರ್ದಾದೇವಿ ದೇವಸ್ಥಾನದ ಪಟ್ಟಾಧೀಶ್ವರ ಪೂಜಾರ್ ಬಸವರಾಜ, ಲಲಿತಕಲಾ ರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಸ್ಥಳೀಯ ಮುಖಂಡರಾದ ರಾಮಕೃಷ್ಣ ರಾಯಕರ್, ರೋಗಾಣಿ ಮಂಜುನಾಥ, ರುದ್ರಾನಾಯ್ಕ್, ಕಲ್ಲಪ್ಪರ ಹುಲುಗಪ್ಪ, ರಂಗಚೌಕಿ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಪಿ. ಪುಷ್ಪ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ಬಿ.ಎಂ.ಎಸ್. ಪ್ರಭು, ರಂಗ ಕಲಾವಿದ ಕೆ.ಹನುಮಂತಪ್ಪ, ಪೌರಕಾರ್ಮಿಕರಾದ ಎಚ್. ಪದ್ಮಾವತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಹುಲಿಗೆಮ್ಮ, ಸಂಗಡಿಗರು ಪ್ರಾರ್ಥಿಸಿದರು. ಪಿ. ಪುಷ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಚೌಕಿ ಕಲಾ ಟ್ರಸ್ಟ್‌ನ ಅಧ್ಯಕ್ಷ ಸರದಾರ ಬಿ. ನೀನಾಸಂ ವಂದಿಸಿದು. ಎಂ. ರಾಧ ನಿರೂಪಿಸಿದರು.
ಕಾರ್ಯಕ್ರಮದ ನಂತರ ಬೆಂಗಳೂರಿನ ಜಂಗಮ ಕಲೆಕ್ಟಿವ್ ಕಲಾವಿದರಿಂದ ಪಠ್ಯ ಆಕರ ಎನ್.ಕೆ. ಹನುಮಂತಯ್ಯ, ಕೆ. ಚಂದ್ರಶೇಖರ್, ಕೆ.ಪಿ. ಲಕ್ಷ್ಮಣ ಅವರ ರಚನೆ, ವಿನ್ಯಾಸ, ನಿರ್ದೇಶನದಲ್ಲಿ ಬಾಬ್ ಮಾರ್ಲಿ ಪ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನ ನಡೆಯಿತು.ಮರಿಯಮ್ಮ ಚೂಡಿ, ಚಂದ್ರಶೇಖರ್ ಕೆ. ಶ್ವೇತಾರಾಣಿ ಎಚ್.ಕೆ, ಭರತ್ ಡಿಂಗ್ರಿ ನಾಟಕದಲ್ಲಿ ಪಾತ್ರ ಅಭಿನಯಿಸಿದ್ದರು. ವಿ.ಎನ್. ನರಸಿಂಹಮೂರ್ತಿ ಡ್ರಮಟರ್ಗ್, ವಿನೀತ್ ಕುಮಾರ್ ಬೆಳಕು, ಜಿ. ರಾಘವೇಂದ್ರ ಬೆಳಕು ನೀಡಿದರು.