ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರ ಪ್ರಮುಖ: ಎಲ್.ವೈ. ಶಿರಕೋಳ

| Published : Dec 20 2024, 12:46 AM IST

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರ ಪ್ರಮುಖ: ಎಲ್.ವೈ. ಶಿರಕೋಳ
Share this Article
  • FB
  • TW
  • Linkdin
  • Email

ಸಾರಾಂಶ

ಎಂತಹ ಸಂದರ್ಭದಲ್ಲಿಯೂ ಪೊಲೀಸರು ಹಾಗೂ ಗೃಹರಕ್ಷಕರ ದಳದ ಸಿಬ್ಬಂದಿ ಸೇವೆಗೆ ಸನ್ನದ್ಧರಾಗಬೇಕಾಗುತ್ತದೆ. ಯಾವುದೇ ರೀತಿಯ ಕಠಿಣ ಪ್ರಸಂಗಗಳನ್ನು ಕೂಡ ಎದುರಿಸಬೇಕಾಗುತ್ತದೆ. ಎಲ್ಲ ಸಂದರ್ಭದಲ್ಲಿ ಎದೆಗುಂದದೇ ಕೆಲಸ ಮಾಡುವ ಜವಾಬ್ದಾರಿ ನಮ್ಮದು ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಎಲ್.ವೈ. ಶಿರಕೋಳ ಹೇಳಿದರು.

ಹಾನಗಲ್ಲ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದೇ ನಮ್ಮ ಹೊಣೆ, ಅದರಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಸಮಾಜದ ಋಣ ತೀರಿಸಿ ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಎಲ್.ವೈ. ಶಿರಕೋಳ ಹೇಳಿದರು.

ಹಾನಗಲ್ಲಿನ ಗುರುಭವನದಲ್ಲಿ ಹಾವೇರಿ ಜಿಲ್ಲಾ ಗೃಹರಕ್ಷಕ ದಳ ಆಯೋಜಿಸಿದ್ದ ಭಾರತ ಗೃಹ ರಕ್ಷಕ ದಳ ದಿನಾಚರಣೆ, ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗೃಹರಕ್ಷಕ ದಳ ನಮ್ಮ ಪೊಲೀಸ್ ಇಲಾಖೆಯ ಸಹೋದರ ಘಟಕ. ನಮ್ಮಿಬ್ಬರದ್ದೂ ಸಮಾಜದ ಹಿತಕ್ಕಾಗಿ ಶ್ರಮಿಸುವಂತಹ ಕೆಲಸ. ಎಂತಹ ಸಂದರ್ಭದಲ್ಲಿಯೂ ನಾವು ಸೇವೆಗೆ ಸನ್ನದ್ಧರಾಗಬೇಕಾಗುತ್ತದೆ. ಯಾವುದೇ ರೀತಿಯ ಕಠಿಣ ಪ್ರಸಂಗಗಳನ್ನು ಕೂಡ ಎದುರಿಸಬೇಕಾಗುತ್ತದೆ. ಎಲ್ಲ ಸಂದರ್ಭದಲ್ಲಿ ಎದೆಗುಂದದೇ ಕೆಲಸ ಮಾಡುವ ಜವಾಬ್ದಾರಿ ನಮ್ಮದು. ಎಲ್ಲ ವಿಷಯದಲ್ಲಿ ಶಿಸ್ತು, ಪರಿಶ್ರಮ ನಮಗೆ ಅತ್ಯವಶ್ಯ ಎಂದರು.

ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ಸಂಗತಿ ಎಲ್ಲರ ಗಮನದಲ್ಲಿರಲಿ. ನಮ್ಮ ನಿತ್ಯದ ಪರಿಶ್ರಮಗಳು, ಸಮಾಜಮುಖಿ ಕೆಲಸಗಳ ಜತೆಗೆ ನಮ್ಮ ಆರೋಗ್ಯವೂ ಮುಖ್ಯ ಎಂಬ ಅರಿವಿರಲಿ. ಸಮಾಜದ ಆರೋಗ್ಯಕ್ಕಾಗಿ ಈಗ ರಕ್ತದಾನ ಅತ್ಯಂತ ಮುಖ್ಯ. ಅದು ಯಾವುದೇ ಕಾರ್ಖಾನೆಯಲ್ಲಿ ತಯಾರಾಗಲಿ ಸಾಧ್ಯವಿಲ್ಲ. ಮನುಷ್ಯರೆ ಮನುಷ್ಯರ ಆರೋಗ್ಯಕ್ಕಾಗಿ ಮಾಡುವ ಅತ್ಯಂತ ಪವಿತ್ರವಾದ ಕಾರ್ಯ ರಕ್ತದಾನವಾಗಿದೆ ಎಂದರು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಪ್ರಮೋದ ನಲವಾಗಿಲ ಮಾತನಾಡಿ, ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಹೆಮ್ಮೆ. ನಮ್ಮ ನಿತ್ಯ ಉದ್ಯೋಗ ವ್ಯವಹಾರಗಳ ನಡುವೆಯೂ ಸಮಾಜದ ಹಿತಕ್ಕಾಗಿ ಅಗತ್ಯ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಮೂಲಕ ನಾವು ಸಮಾಜದ ಹಿತದಲ್ಲಿ ಮುಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಬೇಕು. ಎಲ್ಲ ಕಾಲಕ್ಕೂ ನಮ್ಮ ಸೇವೆ ಸಿದ್ಧವಾಗಿರುತ್ತದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಗೃಹರಕ್ಷಕ ದಳದ ತಾಲೂಕು ಘಟಕಾಧಿಕಾರಿಗಳಾದ ಸಿ.ಎಸ್. ಬೆಲ್ಲದ, ದೇವರಾಜ ಮ್ಯಾಗಲಮನಿ ಉಪಸ್ಥಿತರಿದ್ದರು. ೨೨ ಜನರು ರಕ್ತದಾನ ಮಾಡಿದರು. ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಿಂದ ೫೩ ಜನರ ಉಚಿತ ನೇತ್ರ ಚಿಕಿತ್ಸೆ ನಡೆಸಲಾಯಿತು. ೧೬ ಜನರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಲಾಯಿತು.

ಅಕ್ಕಿಆಲೂರು ಘಟಕಾಧಿಕಾರಿ ಸಿ.ಎಸ್. ಬೆಲ್ಲದ ಸ್ವಾಗತಿಸಿದರು. ಹಾನಗಲ್ಲ ಘಟಕಾಧಿಕಾರಿ ದೇವರಾಜ ಮ್ಯಾಗಲಮನಿ ಕಾರ್ಯಕ್ರಮ ನಿರೂಪಿಸಿದರು.