ಸಮಾಜ ಸುಸ್ಥಿತಿಗೆ ತರುವಲ್ಲಿ ಪತ್ರಕರ್ತನ ಪಾತ್ರ ಮುಖ್ಯ

| Published : Jul 10 2025, 12:49 AM IST / Updated: Jul 10 2025, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡಪತ್ರಕರ್ತರು ಸಮಾಜದ ಕನ್ನಡಿ, ಸಮಾಜದಲ್ಲಿ ನಡೆಯುವ ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳವಣಿಗೆಗಳನ್ನು ಜನರ ಮುಂದಿಡುವ ಮೂಲಕ ಅವರು ಜನಜಾಗೃತಿ ಮೂಡಿಸುತ್ತಾರೆ ಎಂದು ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪತ್ರಕರ್ತರು ಸಮಾಜದ ಕನ್ನಡಿ, ಸಮಾಜದಲ್ಲಿ ನಡೆಯುವ ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳವಣಿಗೆಗಳನ್ನು ಜನರ ಮುಂದಿಡುವ ಮೂಲಕ ಅವರು ಜನಜಾಗೃತಿ ಮೂಡಿಸುತ್ತಾರೆ ಎಂದು ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್ ಹೇಳಿದರು.

ಪಟ್ಟಣದ ವೀರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಅಂಕುಡೊಂಕು ತಿದ್ದುವ ತತ್ವಜ್ಞಾನಿಗಳು. ಸಮಾಜ ಸುಸ್ಥಿತಿಗೆ ತರುವಲ್ಲಿ ಅವರ ಪಾತ್ರ ಅಮೂಲ್ಯವಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಪತ್ರಕರ್ತರ ಹಸ್ತಕ್ಷೇಪ ಜನತೆಗೂ ಆಡಳಿತವನ್ನೂ ಜವಾಬ್ದಾರಿಯುತವಾಗಿಸಲಿದೆ. ಇಂದಿನ ತಂತ್ರಜ್ಞಾನಭರಿತ ಜಗತ್ತಿನಲ್ಲಿ ಸುದ್ದಿಯ ವೇಗ ಹೆಚ್ಚಾದಷ್ಟೇ, ಪತ್ರಕರ್ತನ ಜವಾಬ್ದಾರಿಯೂ ಹೆಚ್ಚಾಗಿದೆ. ಸತ್ಯ ಮತ್ತು ನಿಷ್ಠೆಯ ಜೊತೆ, ಸಮತೋಲನದ ವರದಿ ಪತ್ರಕರ್ತನ ಧರ್ಮವಾಗಿದೆ. ಯಾವುದೇ ರೀತಿಯ ಕಳಪೆ ನೈತಿಕತೆಯನ್ನು ಜನರು ತಕ್ಷಣ ಗುರುತಿಸುತ್ತಾರೆ. ಜನಸಾಮಾನ್ಯರ ಸಮಸ್ಯೆ, ದುಡಿಮೆಯ ಕಠಿಣತೆ, ಅಸಮಾನತೆ, ಕಾನೂನು ಅಕ್ರಮವನ್ನು ಬೆಳಕಿಗೆ ತಂದು ಪರಿಹಾರದ ದಾರಿ ತೋರಿಸುವಲ್ಲಿ ಪತ್ರಕರ್ತರು ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಪಪಂ ಮಾಜಿ ಸದಸ್ಯ ಭೀಮಣ್ಣ ಗುರಿಕಾರ ಮಾತನಾಡಿ, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆಗೆ ಮಾಧ್ಯಮ ಒಂದು ಶಕ್ತಿಯುತ ಸಾಧನವಾಗಿದೆ. ಇದು ಕೇವಲ ಕೆಲಸವಲ್ಲ, ಇದು ಒಂದು ಧರ್ಮ, ಒಂದು ಜವಾಬ್ದಾರಿ. ಈ ಹಿನ್ನೆಲೆಯಲ್ಲಿ, ಪತ್ರಕರ್ತರನ್ನು ಗೌರವಿಸುವುದು ನಮ್ಮ ಸಾಮಾಜಿಕ ಕರ್ತವ್ಯವಾಗಿದೆ. ಪತ್ರಕರ್ತನ ಸರಳ ವರದಿ ಕಡು ಬೇಸರದಲ್ಲಿರುವ ಕುಟುಂಬಕ್ಕೆ ನೆರವಾಗಬಹುದು. ಅವರ ಒಂದು ಫೋಟೋ ಅಥವಾ ವಿಡಿಯೋ ದೇಶದ ಜನರ ಗಮನ ಸೆಳೆದು, ಸಮಸ್ಯೆಗಳಿಗೆ ಪರಿಹಾರ ತರಬಹುದು. ಅವರ ಧ್ವನಿವಿಲ್ಲದವರ ಧ್ವನಿಯಾಗಬಹುದು. ಹೀಗಾಗಿ ಪತ್ರಕರ್ತರು ಕೇವಲ ವರದಿ ಮಾಡುವವರಲ್ಲ, ಅವರು ನಿಶಬ್ದ ಯೋಧರು, ಅವರು ಬದುಕನ್ನು ಬದಲಾಯಿಸಬಲ್ಲ ಶಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಕರ್ತ ಮಹ್ಮದಗೌಸ ಸಿಕ್ಕಲಗಾರ ಮಾತನಾಡಿ, ಸಾಮಾನ್ಯವಾಗಿ ಪತ್ರಿಕಾ ದಿನಾಚರಣೆ ಪತ್ರಕರ್ತರು ಆಚರಣೆ ಮಾಡುವ ಕಾರ್ಯಕ್ರಮವಾಗಿದೆ. ಆದರೆ ಪಟ್ಟಣದಲ್ಲಿ ಪತ್ರಿಕಾ ಓದುಗರಾದ ಸಿದ್ದಣ್ಣ ಕಟ್ಟಿಮನಿ, ಭೀಮಣ್ಣ ಗುರಿಕಾರ ಅವರು ಪ್ರತಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸುವ ಮೂಲಕ ಒಂದು ವಿಷೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸತಂದಿದೆ ಎಂದರು.

ಅಧ್ಯಕ್ಷತೆಯನ್ನು ಪಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ವಹಿಸಿದ್ದರು, ನವದಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ ಉದ್ಘಾಟಿಸಿದರು. ಮಂಜುನಾಥ ಕಟ್ಟಿಮನಿ ಪ್ರಸ್ತಾವಿಕವಾಗಿ ಮಾತನಾಡಿದರು, ಯೂನುಸ್ ಮೂಲಿಮನಿ ನಿರೂಪಿಸಿದರು.

ಸನ್ಮಾನ: ಪತ್ರಕರ್ತರಾದ ಮೈಬೂಬ್‌ ಹಳ್ಳೂರ, ಯೂನುಸ್ ಮೂಲಿಮನಿ, ಕಾಶೀನಾಥ ಬಿರಾದಾರ, ಮಹಾಂತೇಶ ನೂಲಿನವರ, ಮಹ್ಮದಗೌಸ್‌ ಸಿಕ್ಕಲಗಾರ, ಮಹಾಂತಯ್ಯ ಮೆನದಾಳಮಠ, ಅಬುಬಕರ ರಕ್ಕಸಗಿ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಇತ್ತಿಚೆಗೆ ಮೃತಪಟ್ಟ ಹಿರಿಯ ಪತ್ರಕರ್ತ ದಿ.ಉಮೇಶ ಆಲಕೊಪ್ಪರ ಕುಟುಂಬಕ್ಕೆ ಸ್ಮಾರಕ ಪತ್ರಿಕೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ವೇಳೆ ಅಮರೇಶ ದೇಶಮುಖ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ, ರಾಯಣಗೌಡ ತಾತರೆಡ್ಡಿ, ಮಹಾಂತೇಶ ಗಂಗನಗೌಡ, ಉಮರ್ ಫಾರುಕ್ ಮೂಲಿಮನಿ, ಮುದಕಪ್ಪ ಕಾನಿಕೇರಿ, ಭೀಮಣ್ಣ ಗುರಿಕಾರ ಹಾಗೂ ಲತಾ ಕಟ್ಟಿಮನಿ, ಹಣಮಂತ ಕುರಿ, ಪಪಂ ಸದಸ್ಯರಾದ ಶಿವಪುತ್ರಪ್ಪ ಗುರಿಕಾರ, ಯಮನವ್ವ ಬಂಡಿವಡ್ಡರ, ಅಂಬ್ರಪ್ಪ ಸೀರಿ, ವೀರೇಶ್ವರ, ಪಿಕೆಪಿಎಸ್ ಅಧ್ಯಕ್ಷ ವೀರೇಶ ಗಂಗನಗೌಡರ, ಸಿದ್ದಪ್ಪ ಕಟ್ಟಿಮನಿ, ರಾಜು ಮಸಿಬನಾಳ ಇನ್ನಿತರರು ಇದ್ದರು.