ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಮುಖ್ಯ

| Published : Feb 03 2025, 12:32 AM IST

ಸಾರಾಂಶ

ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಯ ಪಾತ್ರ ಬಹು ಮುಖ್ಯವಾಗಿದ್ದು, ಸ್ವಚ್ಛತೆ ಮತ್ತು ಸುರಕ್ಷತೆಯಿಂದ ಗುಣಮಟ್ಟದ ಅಡುಗೆ ತಯಾರಿಸಿ ಮಕ್ಕಳಿಗೆ ಊಟ ನೀಡುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ಸಿಬ್ಬಂದಿಯ ಪಾತ್ರ ಬಹು ಮುಖ್ಯವಾಗಿದ್ದು, ಸ್ವಚ್ಛತೆ ಮತ್ತು ಸುರಕ್ಷತೆಯಿಂದ ಗುಣಮಟ್ಟದ ಅಡುಗೆ ತಯಾರಿಸಿ ಮಕ್ಕಳಿಗೆ ಊಟ ನೀಡುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಸಿಇಎಸ್ ಸಂಸ್ಥೆಯ ಆವರಣದಲ್ಲಿನ ಸಭಾ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಯವರಿಗೆ ಏರ್ಪಡಿಸಿದ್ದ ಒಂದು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದು ಕ್ಷೇತ್ರಗಳಲ್ಲಿ ಸಂಘಟನೆ ಮತ್ತು ತರಬೇತಿ ಅತೀ ಅವಶ್ಯಕವಾಗಿದೆ. ನಾವು ಮಾಡುವ ಕಾರ್ಯದಲ್ಲಿ ಕಾರ್ಯಕ್ಷಮತೆ ಹಾಗೂ ಹೊಸ ವ್ಯವಸ್ಥೆಗಳ ಅಳವಡಿಕೆ ಮತ್ತು ಸುಧಾರಣೆಗೆ ತರಬೇತಿ ಬಹುಮುಖ್ಯವಾಗಿದೆ. ತರಬೇತಿಯ ಮೂಲಕ ನಿತ್ಯ ನೀವು ನಿರ್ವಹಿಸುವ ಕಾರ್ಯದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರಗಳ ಹಲವು ಯೋಜನೆಗಳಲ್ಲಿ ಅಕ್ಷರ ದಾಸೋಹ ಯೋಜನೆಯೂ ಒಂದಾಗಿದ್ದು, ಇದರ ಯಶಸ್ಸಿಗೆ ಅಡುಗೆ ಸಿಬ್ಬಂದಿಯ ಬಹು ಮುಖ್ಯವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಮಾತನಾಡಿ, ಅನ್ನ ಮತ್ತು ಅಕ್ಷರಕ್ಕೆ ಅವಿನಾಭಾವ ಸಂಬಂಧವಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಭಾವಿ ಪ್ರಜೆಗಳಿಗೆ ತಯ್ಯಾರು ಮಾಡುವ ಕಾರ್ಯದಲ್ಲಿ ಅವರಿಗೆ ಪೌಷ್ಟಿಕ ಆಹಾರ ಸಿದ್ಧಗೊಳಿಸಿ ಅವರಿಗೆ ಪೂರಕ ಶಕ್ತಿ ನೀಡುವ ಕಾರ್ಯದಲ್ಲಿ ಅಡುಗೆ ಸಿಬ್ಬಂದಿ ಕಾರ್ಯ ಹೆಚ್ಚಿದೆ. ಅಡುಗೆ ಸಿಬ್ಬಂದಿಯವರು ಸಿದ್ಧತೆ, ಸ್ವಚ್ಛತೆ ಸಮನ್ವತೆಯನ್ನು ಸಾಧಿಸಬೇಕು. ಅಡುಗೆ ಕೇಂದ್ರದಲ್ಲಿ ಸುರಕ್ಷತೆ ಕಾಪಾಡಿಕೊಳ್ಳಬೇಕು. ಅಡುಗೆ ಸಾಮಗ್ರಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು. ಸುರಕ್ಷಿತವಾಗಿ ಗ್ಯಾಸ ಸಿಲೆಂಡರ್ ಬಳಕೆ ಮಾಡಬೇಕು ಎಂದರು.ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ಮಕ್ಕಳಿಗೆ ಅನ್ನದಾನವನ್ನು ಮಾಡುತ್ತಿರುವ ತಮ್ಮ ಕೆಲಸ ತಾಯಿ ಸಮಾನವಾದ ಕೆಲಸವಾಗಿದೆ. ಸ್ವಚ್ಛತೆ ಸುರಕ್ಷತೆಯಿಂದ ಅಡುಗೆ ಸಿದ್ದಪಡಿಸಿ ಮಕ್ಕಳಿಗೆ ಊಟವನ್ನು ಬಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ 20 ಉತ್ತಮ ಅಡುಗೆದಾರರ ಸಿಬ್ಬಂದಿಯವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸ್ಥಳೀಯ ಬಸವೇಶ್ವರ ಗ್ಯಾಸ್ ಏಜೆನ್ಸಿಯಿಂದ ಇಂಧನ ಸುರಕ್ಷಿತೆ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಿಎಂ ಪೋಷಣ್ ಶಕ್ತಿ ನಿರ್ಮಾಣ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಮೇಘರಾಜ ಮಾಳಗಿಮನಿ, ರಾಜು ತಳವಾರ, ಕುಮಾರ ಪುಟ್ಟಪ್ಪಗೌಡ್ರ, ಆರ್.ಎಚ್. ಬೆಟ್ಟಳ್ಳೇರ, ಎಸ್.ಎಸ್. ಕೋರಿಗೌಡ್ರ, ನಾಗರಾಜ ಪುರದ, ಎ.ಎಂ. ಘಾಸಿ, ಅಲೀಂ ಹಾವೇರಿ, ಬಿ.ಡಿ. ಪಾಟೀಲ, ಜಗದೀಶ ಜೋಗಿಹಳ್ಳಿ, ಸಿ.ಡಿ.ಕರಿಯಣ್ಣನವರ, ಬಿಸಿಯೂಟ ತಯಾರಕರ ತಾಲೂಕು ಘಟಕದ ಅಧ್ಯಕ್ಷರಾದ ಲತಾ ಹಿರೇಮಠ, ಶೃತಿ ಪುರದಕೇರಿ ಸೇರಿದಂತೆ ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ಅಡುಗೆ ಸಿಬ್ಬಂದಿ ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ ಶಿಕ್ಷಕಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.