ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಸದೃಢ ಭಾರತ ಕಟ್ಟಲು ವಕೀಲರು ಮಹತ್ವದ ಪಾತ್ರ ವಹಿಸಬೇಕಾಗಿದ್ದು, ಕಾನೂನುಗಳನ್ನು ತಿಳಿದುಕೊಂಡು ರಾಷ್ಟ್ರ ಸುರಕ್ಷತೆಗೆ ಕೊಡುಗೆ ನೀಡಿ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಪಿ.ಸಂದೇಶ್ ಹೇಳಿದರು.ಕೇಂದ್ರ ಸರ್ಕಾರ ಇತ್ತೀಚೆಗೆ ಕಾಯಿದೆಗಳಾದ ಐಪಿಸಿ ಸೆಕ್ಷನ್ ಅನ್ನು ಭಾರತೀಯ ನ್ಯಾಯಸಂಹಿತೆಯಾಗಿ ಬದಲಾವಣೆ ಮಾಡಿರುವುದು, ಇಂಡಿಯನ್ ಎವಿಡೆನ್ಸ್ ಕಾಯ್ದೆಯನ್ನು ಭಾರತೀಯ ಸಾಕ್ಷ ಅಧಿನಿಯಮವಾಗಿ ಬದಲಾವಣೆ ಮಾಡಿರುವುದು, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಸರ್ ಅನ್ನು ಭಾರತೀಯ ನಾಗರೀಕ ಸುರಕ್ಷ ಸಂಹಿತೆಯಾಗಿ ಬದಲಾವಣೆ ಮಾಡಿರುವ ಕುರಿತು ವಕೀಲರಿಗೆ ಮಾರ್ಗದರ್ಶನ ನೀಡಲು ನಗರದ ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ನಿರಂತರ ಅಧ್ಯಯನ ಅಗತ್ಯವಕೀಲರು ನಿರಂತರ ಅಧ್ಯಯನಶೀಲರಾಗಿದ್ದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ, ಗ್ರಂಥಾಲಯ ಬಳಸಿಕೊಳ್ಳಿ, ಹೊಸ ಹೊಸ ಕಾಯ್ದೆಗಳು ಜಾರಿಯಾಗುತ್ತಲೇ ಇರುತ್ತವೆ, ಜತೆಗೆ ಅನೇಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ತೀರ್ಪುಗಳು ಹೊರಬಂದಾಗ ಅವುಗಳ ಅಭ್ಯಾಸವೂಮಾಡುವುದು ಮುಖ್ಯ. ಜ್ಞಾನಕ್ಕೆ ಕೊನೆಯೇ ಇಲ್ಲ ಓದಿದಷ್ಟು ಇನ್ನಷ್ಟು ಹೆಚ್ಚಿನ ಜ್ಞಾನ ನಮಗೆ ಅಗತ್ಯವಿದೆ ಎಂದು ಅನಿಸುತ್ತದೆ, ಈ ನಿಟ್ಟಿನಲ್ಲಿ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಲು ವಕೀಲರು ಅಧ್ಯಯನ ಮುಂದುವರಿಸಿ ಎಂದರು.ಕರ್ನಾಟಕ ವಕೀಲರ ಪರಿಷತ್ ಸದಸ್ಯ ಎಸ್.ಹರೀಶ್ ಮಾತನಾಡಿ, ಕೋಲಾರ ವಕೀಲರ ಸಂಘ ಅತ್ಯಂತ ಕ್ರಿಯಾಶೀಲವಾಗಿದ್ದು, ವಕೀಲರ ವೃತ್ತಿ ಘನತೆ ಹೆಚ್ಚಿಸಲು ಅಗತ್ಯವಾದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ, ಇದನ್ನು ವಕೀಲರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಕೀಲರಿಗೆ ಕಾನೂನು ಮಾಹಿತಿಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಮಾತನಾಡಿ, ಈ ರೀತಿಯ ತರಬೇತಿಗಳಿಂದ, ಉಪನ್ಯಾಸಗಳಿಂದ ವಕೀಲರ ಜ್ಞಾನಾಭಿವೃದ್ದಿಗೆ ಸಹಕಾರಿ, ಕಾನೂನುಗಳ ಅರಿವು ಹೆಚ್ಚಲಿದೆ. ಲೋಕ ಅದಾಲತ್ ಮೂಲಕ ಕಕ್ಷಿದಾರರಿಗೆ ಸಮಯ, ಹಣ ಉಳಿಸುವ ಕಾಯಕದಲ್ಲಿ ಕೋಲಾರ ಜಿಲ್ಲೆಯ ವಕೀಲರು ಮುಖ್ಯಪಾತ್ರ ವಹಿಸಿದ್ದಾರೆ, ೨೦ ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥವಾಗಿದ್ದು, ಇದಕ್ಕೆ ವಕೀಲರ ಸಂಘದ ಸಹಕಾರ ಕಾರಣ ಎಂದರು.ಯುವ ವಕೀಲರು ಆಸಕ್ತಿ ವಹಿಸಲಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಜಿಲ್ಲೆಯಿಂದ ಅನೇಕ ಮಹನೀಯರು ಹೈಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದಾರೆ, ಅವರ ಸಹಕಾರ, ಅವರ ಜ್ಞಾನ ನಮ್ಮ ವಕೀಲರಿಗೂ ಹರಿಯುವಂತಾಗಲಿ, ಅವರು ನ್ಯಾಯಾಂಗದ ಅನೇಕ ಮಜಲುಗಳ ಕುರಿತು ವಕೀಲರಿಗೆ ತಿಳಿಸಿಕೊಡಲು ಉತ್ಸುಕರಾಗಿರುವಾಗ ಯುವ ವಕೀಲರು ಅದನ್ನು ಕಲಿಯಲು ಮುಂದೆ ಬರಬೇಕು ಎಂದು ಕೋರಿದರು.ನ್ಯಾಯಾಧೀಶರಾದ ದೇವಮಣಿ, ದಿವ್ಯ, ವಕೀಲರ ಸಂಘದ ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು, ಖಜಾಂಚಿ ನವೀನ್,ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ, ನಂಜುಂಡಗೌಡ ಇದ್ದರು.
೧