ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಪ್ರಸ್ತುತ ದಿನಮಾನಗಳಲ್ಲಿ ಶ್ರಮ ಸಂಸ್ಕೃತಿ ನಾಶವಾಗುತ್ತಿದೆ. ನಮ್ಮ ಸಾಹಿತ್ಯ, ಸಂಸ್ಕೃತಿ, ಕಥೆ, ಕಾದಂಬರಿ ವಸ್ತುಗಳು ಯಾವವು ಎಂಬ ಪ್ರಶ್ನೆ ಉದ್ಭವವಾಗಿದೆ. ಮಾಧ್ಯಮ-ಟಿವಿಗಳೂ ಉದ್ಯಮಗಳಾಗಿವೆ. ಹೀಗಾಗಿ, ಸಾಹಿತ್ಯದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇದನ್ನು ಅರಿತು ಸಾಹಿತಿಗಳು ಮುಂದಿನ ಹೆಜ್ಜೆ ಇಡಬೇಕಿದೆ ಎಂದು ಲೇಖಕ, ಚಿಂತಕ ಡಾ. ಸಿದ್ಧನಗೌಡ ಪಾಟೀಲ ಸಾಹಿತಿಗಳ ಮೇಲಿನ ಜವಾಬ್ದಾರಿಯ ಕುರಿತು ಎಚ್ಚರಿಸಿದರು.ಇಲ್ಲಿಯ ಜೆಎಸ್ಸೆಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಗುರುವಾರ ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಕಾರ್ಪೋರೆಟ್ ಕಂಪನಿಗಳು ಉದ್ಯಮಕ್ಕೆ ಅನುಕೂಲಕರ ಶಿಕ್ಷಣ ರೂಪಿಸುತ್ತಿವೆ. ಹೀಗಾಗಿ, ಇದನ್ನು ತಡೆಯುವಲ್ಲಿ ಸಾಹಿತಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ದೇಶದ ಸರ್ಕಾರಗಳು ಜನಸ್ನೇಹಿ ಆಗದೇ, ಉದ್ಯಮಕೇಂದ್ರಗಳಾಗಿವೆ. ಆದ್ದರಿಂದ ಪ್ರಭುತ್ವದಲ್ಲಿ ಇದ್ದೇ, ಪ್ರಭುತ್ವ ಪ್ರಶ್ನಿಸಬೇಕು. ಸಾಹಿತ್ಯ ಪ್ರಭುತ್ವ ವಿರೋಧಿಸಬಾರದು ಎಂಬುದು ಎಲ್ಲೂ ಇಲ್ಲ. ಪ್ರಶ್ನಿಸದಿದ್ದರೆ ಅದು ಸಾಹಿತ್ಯ ಅಲ್ಲ ಎಂದು ಪ್ರತಿಪಾದಿಸಿದರು.
ಖಳನಾಯಕನಾದ ಗಾಂಧಿಕ್ರೌರ್ಯ ಇಂದು ಶೌರ್ಯವಾಗಿ ಬಣ್ಣಿಸಲಾಗಿದೆ. ಸಹಿಷ್ಣುತೆಯನ್ನು ಹೇಡಿತನ, ಸಹಬಾಳ್ವೆಯನ್ನು ಷಂಡತನಕ್ಕೆ ಬಳಸಲಾಗುತ್ತಿದೆ. ಇದರಿಂದಾಗಿಯೇ ಇಂದು ಗಾಂಧಿ ಖಳನಾಯಕ, ಗೋಡ್ಸೆ ನಾಯಕನಾಗಿದ್ದು ದೇಶದ ದುರಂತ ಎಂದು ಸಿದ್ಧನಗೌಡ ಪಾಟೀಲರು ಬೇಸರ ವ್ಯಕ್ತಪಡಿಸಿ, ಕನ್ನಡ ನಾಡು, ಶಿಕ್ಷಣ, ಕೈಗಾರಿಕೆ ಅಭಿವೃದ್ಧಿ ಜೊತೆಗೆ ಕನ್ನಡ ಅನ್ನ ಕೊಡುವ ಭಾಷೆಯಾಗಿ ಮಾರ್ಪಡಬೇಕು. ಅಲ್ಲದೇ, ಕನ್ನಡದ ನೆಲ-ಜಲದ ಹೋರಾಟ ಶ್ರೀಮಂತಗೊಳ್ಳಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆಗೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಕೃಷ್ಣಾ, ನರ್ಮದಾ ನದಿಗೆ ಸಾಂಸ್ಕೃತಿಕ ಅಸ್ಮಿತೆ ಇಲ್ಲ. ಆದರೆ, ದಕ್ಷಿಣದ ಕಾವೇರಿಗೆ ಸಾಂಸ್ಕೃತಿಕ ಅಸ್ಮಿತೆ ಇದೆ. ಅಷ್ಟೇ ಏಕೆ? ರೊಟ್ಟಿ ಮತ್ತು ಮುದ್ದೆ ತಿನ್ನುವವರು ಅನಾಗರಿಕ. ಪಿಜ್ಜಾ ತಿನ್ನುವುದು ನಾಗರಿಕ ಎಂಬ ಕೆಟ್ಟ ಸಂಸ್ಕೃತಿ ದಾಳಿ ಮಾಡಿದೆ. ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದ ಶರ್ಮಾ ಅವರು, ಆಳುವ ಪ್ರಭುತ್ವ ನೇರ ತರಾಟೆ ತೆಗೆದುಕೊಂಡಿದ್ದು ಹೊಸ ಬದಲಾವಣೆ ಎಂದರು.ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜ, ಜಿ.ಬಿ. ಪಾಟೀಲ, ವಸಂತ ಲದ್ವಾ, ಮಲ್ಲಿಕಾರ್ಜುನ ಯಂಡಿಗೇರಿ, ಎಸ್.ಕೆ. ಆದಪ್ಪನವರ, ಡಾ. ಎಸ್.ಎಸ್. ದೊಡಮನಿ ಇದ್ದರು.
ಪ್ರೊ. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಡಾ.ಜಿನದತ್ತ ಹಡಗಲಿ ನಿರೂಪಿಸಿದರು. ಡಾ.ಲಿಂಗರಾಜ ಅಂಗಡಿ ವಂದಿಸಿದರು.ಮೂರು ಪ್ರಮುಖ ನಿರ್ಣಯ
1) ಸರ್ಕಾರ ಪಾಸು ಮಾಡಿದ ನಾಮಫಲಕದಲ್ಲಿ ಕನ್ನಡ ಭಾಷೆಗೆ ಶೇ. 60ರಷ್ಟು ಕನ್ನಡ ಕಡ್ಡಾಯದ ಬದಲು ಶೇ.100ಷ್ಟು ಆದ್ಯತೆ ನೀಡಬೇಕು. ಇದು ಬರುವ ನವೆಂಬರ್ ತಿಂಗಳೊಳಗೆ ಜಾರಿಗೆ ಬರಬೇಕು.2) ವೃತ್ತಿ ಕಾಲೇಜುಗಳಲ್ಲಿ ಕನ್ನಡ ಪಠ್ಯ ಕಡ್ಡಾಯ ಬೋಧಿಸಲ್ಪಡಬೇಕು. ಅಂಕಪಟ್ಟಿಯಲ್ಲಿ ಕನ್ನಡ ವಿಷಯಕ್ಕೆ ಸಂಬಂಧ ಅಂಕಗಳು ನಮೂದಿಸಬೇಕು. ಶ್ರೇಣಿ ಕೊಡುವಾಗ ಕನ್ನಡ ವಿಷಯದ ಅಂಕಗಳನ್ನು ಪರಿಗಣಿಸಬೇಕು.
3) ಯಾವುದೇ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು. ಅಲ್ಲದೇ, ಪ್ರಾಥಮಿಕ ಹಂತದ ವರೆಗೆ ಎಲ್ಲರಿಗೂ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆಯುವುದು ಕಡ್ಡಾಯಗೊಳಿಸಬೇಕು.ಅಪಾಯಕನ್ನಡ ಭಾಷೆ ಮತ್ತು ಸಂಸ್ಕೃತಿ ಅಪಾಯದಲ್ಲಿದೆ. ಭವಿಷ್ಯದಲ್ಲಿ ಎಂಥ ಸಂಸ್ಕೃತಿ ಬರಬಹುದೆಂದು ಊಹಿಸುವುದು ಕಷ್ಟ. ಭಾಷೆ-ಸಂಸ್ಕೃತಿ ಉಳಿವು ಅಗತ್ಯವಿದೆ. ಹೀಗಾಗಿ, ಮೊದಲು ಜ್ಞಾನಕ್ಕೆ ಹಾಗೂ ಅನ್ನಕ್ಕೆ ಕನ್ನಡ ಬರಬೇಕಿದೆ.-ಡಾ.ಸಿದ್ಧನಗೌಡ ಪಾಟೀಲ, ಚಿಂತಕರು