ಕೃಷಿಯಲ್ಲಿ ಸೂಕ್ಷ್ಮಾಣು ಜೀವಿಗಳ ಪಾತ್ರ ಮಹತ್ವದ್ದು: ಡಾ. ಅಬ್ದುಲ್ ಕರೀಮ್

| Published : Apr 08 2024, 01:05 AM IST

ಕೃಷಿಯಲ್ಲಿ ಸೂಕ್ಷ್ಮಾಣು ಜೀವಿಗಳ ಪಾತ್ರ ಮಹತ್ವದ್ದು: ಡಾ. ಅಬ್ದುಲ್ ಕರೀಮ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರ ಬಹುಮುಖ್ಯವಾಗಿದ್ದು, ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾವಯವ ಕೃಷಿಯ ಮಹತ್ವವನ್ನು ಅರಿಯಬೇಕು.

ಶಿರಸಿ: ಮನುವಿಕಾಸ ಸ್ವಯಂಸೇವಾ ಸಂಸ್ಥೆಯು ಸಿಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಶನಿವಾರ ನಗರದ ಮಧುವನ ಹೋಟೆಲ್‌ನಲ್ಲಿ ಆಯ್ದ ರೈತ ಮಹಿಳೆಯರಿಗಾಗಿ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತೋಟಗಾರಿಕಾ ಸಂಶೋಧನಾ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಅಬ್ದುಲ್ ಕರೀಮ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಕೃಷಿಯಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರ ಬಹುಮುಖ್ಯವಾಗಿದ್ದು, ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾವಯವ ಕೃಷಿಯ ಮಹತ್ವವನ್ನು ಅರಿಯಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಸಿಎಂಎಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಬಗ್ಗೆ ವಿಸ್ತರವಾಗಿ ತಿಳಿಸಿದರು.ಹಿಂದಿನ ಕಾಲದಿಂದ ನಡೆದುಬಂದ ಕೃಷಿ ಸಂಪ್ರದಾಯಗಳು ಈಗ ಬದಲಾಗಿದೆ. ಈಗಿನ ಕಾಲದಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಅದರಿಂದ ಭೂಮಿಯಲ್ಲಿರುವ ಸೂಕ್ಮಣು ಜೀವಿಗಳಿಗೆ ಹಾಗೂ ಭೂಮಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ರೈತರು ಮತ್ತು ಕೃಷಿ ಪ್ರಶಸ್ತಿ ಪುರಸ್ಕೃತ ಬಸವರಾಜ ನಡುವಿನಮನಿ ಮಾತನಾಡಿ, ತಾವು ಅಳವಡಿಸಿಕೊಂಡಿರುವ ಸುಸ್ಥಿರ ಕೃಷಿ ಮತ್ತು ಅದರ ಪ್ರಯೋಜನಗಳ ಕುರಿತು ಮಾಹಿತಿ ಹಂಚಿಕೊಂಡರು.

ರೈತರು ತಮಗಿರುವ ಸೀಮಿತ ಜಮೀನಿನಲ್ಲಿ ಹೇಗೆ ವ್ಯವಸ್ಥಿತವಾಗಿ ಕೃಷಿ ಮಾಡಬಹುದು. ಹೊಸ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಬೆಳೆಗಳನ್ನು ಬೆಳೆಯುವ ಬಗೆ ಮತ್ತು ಅದಕ್ಕಿರುವ ಸವಾಲುಗಳನ್ನು ರೈತ ಮಹಿಳೆಯರಿಗೆ ತಿಳಿಸಿದರು.

ಪ್ರಗತಿಪರ ಜೇನು ಕೃಷಿಕರಾದ ತಾರಗೋಡಿನ ಮಧುಕೇಶ್ವರ ಹೆಗಡೆ ಮಾತನಾಡಿ, ಜೇನು ಕೃಷಿಯ ಪರಿಕಲ್ಪನೆ ಮತ್ತು ಜೇನಿನ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಮಾರುಕಟ್ಟೆಯಲ್ಲಿ ಅವುಗಳ ಬೆಳೆಗಳ ಕುರಿತು ಮಾಹಿತಿ ನೀಡಿದರು.

ಮನುವಿಕಾಸ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯ ಪ್ರೊ. ಕೆಂಪರಾಜು ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಕೃಷಿಯಿಂದ ಯುವ ಸಮೂಹ ಹಿಂದೆ ಸರಿದಿದೆ. ಇದು ಕಳವಳಕಾರಿ ಸಂಗತಿ. ಮನುಷ್ಯನಿಗೆ ನೀರು ಗಾಳಿ ಎಷ್ಟು ಮುಖ್ಯವೋ ಕೃಷಿಯೂ ಅಷ್ಟೇ ಮುಖ್ಯವಾಗಿದೆ ಎಂದರು.

ತಾಲೂಕಿನ ಸಂತೊಳ್ಳಿ, ಕುಪ್ಪಗಡ್ಡೆ, ಬೀಳೂರು, ಮತ್ತಿಹಳ್ಳಿ ಯಡಯೂರಬೈಲು ಕುಪ್ಪಗಡ್ಡೆ ಮತ್ತಿಹಳ್ಳಿ ಕಪಗೇರಿ ಗ್ರಾಮಗಳ ೫೦ಕ್ಕೂ ಹೆಚ್ಚು ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿ ಸುಸ್ಥಿರ ಕೃಷಿಯ ಬಗೆಗೆ ಮಾಹಿತಿ ಪಡೆಯುವ ಮೂಲಕ ತಮಗಿರುವ ಗೊಂದಲಗಳನ್ನು ಪರಸ್ಪರ ಚರ್ಚೆಯ ಮೂಖೇನ ಬಗೆಹರಿಸಿಕೊಂಡರು.

ಮನುವಿಕಾಸ ಸಂಸ್ಥೆಯ ಯೋಜನಾ ಉಪನಿರ್ದೇಶಕರಾದ ಅಶ್ವತ್ಥ ನಾಯ್ಕ ನಿರೂಪಿಸಿದರು. ಸಂಸ್ಥೆಯ ಕ್ಷೇತ್ರ ಸಂಯೋಜಕ ನವೀನ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಗಣಪತಿ ಹೆಗಡೆ, ಭವಾನಿ ನಾಯ್ಕ, ಗೀತಾ ನಿಲೇಕಣಿ ಉಪಸ್ಥಿತರಿದ್ದರು.