ನಾಡಿನ ಪ್ರಗತಿಗೆ ಮಠಗಳ ಪಾತ್ರ ದೊಡ್ಡದು: ಸಚಿವ ಮಹದೇವಪ್ಪ

| Published : Mar 06 2025, 12:33 AM IST

ಸಾರಾಂಶ

ದಾಬಸ್‍ಪೇಟೆ: ಭಾರತೀಯ ಪರಂಪರೆ ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿದೆ. ನೂರಾರು ಜಾತಿಗಳಿದ್ದರೂ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಇದು ನಮ್ಮ ದೇಶದ ಸಂಸ್ಕೃತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ದಾಬಸ್‍ಪೇಟೆ: ಭಾರತೀಯ ಪರಂಪರೆ ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿದೆ. ನೂರಾರು ಜಾತಿಗಳಿದ್ದರೂ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಇದು ನಮ್ಮ ದೇಶದ ಸಂಸ್ಕೃತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಪ್ರಗತಿಗೆ ಮಠಗಳ ಪಾತ್ರ ದೊಡ್ಡದು. ಯಾವ ಸರ್ಕಾರಗಳು ಮಾಡದ ಕೆಲಸ ರಾಜ್ಯದಲ್ಲಿ ಮಠಗಳು ಮಾಡುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಮಠಗಳು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಅನ್ನದಾಸೋಹ, ಜ್ಞಾನ ದಾಸೋಹ, ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಡಾ.ಶ್ರೀ ಸಿದ್ದರಾಜು ಸ್ವಾಮೀಜಿ ಸಲ್ಲಿಸುವ ಸೇವೆ ಅಮೂಲ್ಯವಾದದ್ದು. ಈ ಮಠ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಮಠವಾಗಿದೆ ಎಂದು ಪ್ರಶಂಸಿಸಿದರು.

ನಾಡಿನ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳೇನಾದರೂ ತಲೆ ಎತ್ತಿದ್ದರೆ ಅದು ಮಠಗಳಿಂದ ಮಾತ್ರ ಸಾಧ್ಯ. ಅಂದು ಮಠಗಳೇನಾದರೂ ಇಲ್ಲದೆ ಅಥವಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದಿದ್ದರೆ ಲಕ್ಷಾಂತರ ಬಡ ಯುವಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸಮಾಜವನ್ನು ಮುನ್ನಡೆಸುವಲ್ಲಿ ಮಠಗಳ ಪಾತ್ರ ಬಹುಮುಖ್ಯವಾದದ್ದು. ಸಮಾಜಕ್ಕೆ ದಿಕ್ಸೂಚಿಯಾಗಿ ಮಠಗಳು ಇರಬೇಕು. ಆ ಹಾದಿಯಲ್ಲಿ ಪಾಲನಹಳ್ಳಿ ಮಠ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಕಳೆದ ಒಂದು ವಾರ ನಡೆದ ಧಾರ್ಮಿಕ ಕಾರ್ಯಕ್ರಮ, ಮಹಾರುದ್ರಯಾಗ, ದೇವರ ಉತ್ಸವ, ನಾಟಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಸಿನಿಮಾ ನಟರು, ಭಕ್ತಾದಿಗಳು ಆಗಮಿಸಿದ್ದಕ್ಕೆ ಸಂತೋಷವಾಗಿದ್ದು, ಭಕ್ತರ ಸಹಕಾರ ಹೀಗೆ ಇರಲಿ ಎಂದು ಹೇಳಿದರು.ಪೋಟೋ 5 : ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿ ಸನ್ಮಾನಿಸಿದರು.