ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ಜನಪರ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಪ್ರಾಧಿಕಾರ ಸದಸ್ಯರ ಪಾತ್ರ ಪ್ರಮುಖವಾಗಿದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಹತ್ತರ ಗ್ಯಾರಂಟಿ ಯೋಜನೆಗಳನ್ನು ರೂಪಿಸುವ ಮೂಲಕ ಬಡವರು, ಕಾರ್ಮಿಕರು, ರೈತರು, ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ ಎಂದು ಹೇಳಿದರು.
ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ಸಾಕಷ್ಟು ಮುತುವರ್ಜಿ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಯಾರೊಬ್ಬರೂ ಗ್ಯಾರಂಟಿ ಯೋಜನೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಲೋಕಸಭೆ ಚುನಾವಣೆ ಬಳಿಕ ಹಳ್ಳಿ-ಹಳ್ಳಿಗಳಲ್ಲಿ ಗ್ರಾಮಸಭೆ ನಡೆಸಿ ಈ ಗ್ಯಾರಂಟಿ ಅನುಷ್ಠಾನಕ್ಕೆ ಮತ್ತಷ್ಟು ವೇಗ ನೀಡಲಾಗುವುದು ಎಂದವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್ ಮಾತನಾಡಿ, ರಾಜ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಅನ್ನಭಾಗ್ಯ, ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಗೊಳಿಸಲು ಗೃಹಜ್ಯೋತಿ, ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿರುವ ಗೃಹಲಕ್ಷ್ಮೀ, ನಿರುದ್ಯೋಗಿಗಳಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಹೊಸದಾಗಿ ರಚನೆಯಾದ ಈ ಅನುಷ್ಠಾನ ಸಮಿತಿಯು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಭೆ ನಡೆಸಿ ಆಡಳಿತ ಮತ್ತು ಅಭಿವೃದ್ಧಿಗೆ ಚುರುಕು ಮುಟ್ಟಿಸಲಾಗಿದೆ ಎಂದರು.
ತಾಪಂ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ಸಿಡಿಪಿಒ ಎಚ್.ಹೊಳೆಪ್ಪ, ಆಹಾರ ಇಲಾಖೆಯ ಶಿರಸ್ತೆದಾರ ಲೋಕೋಶ ಡಂಗೆ, ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ರಾಜಶೇಖರ ವಂಟಮೂರಿ ಮತ್ತಿತರರು ಉಪಸ್ಥಿತರಿದ್ದರು.--- ಬಾಕ್ಸ್ ---
ಗ್ಯಾರಂಟಿ ಪ್ರಾಧಿಕಾರ: ತಾಲೂಕಿಗೆ ಶಾನೂಲ್ ಅಧ್ಯಕ್ಷಹುಕ್ಕೇರಿ: ಹೊಸದಾಗಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಾಧಿಕಾರ ರಚಿಸಲಾಗಿದ್ದು, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾನೂಲ್ ತಹಸೀಲ್ದಾರ್ ಅವರನ್ನು ತಾಲೂಕು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸದಸ್ಯರನ್ನಾಗಿ ಶ್ರೀನಿವಾಸ ವ್ಯಾಪಾರಿ, ಆನಂದ ಖಾತೇದಾರ, ಅಣ್ಣೇಗೌಡ ಪಾಟೀಲ, ವಿಠ್ಠಲ ಗುರವ, ರಾಜು ಗೋಸರವಾಡಕರ, ಸುಭಾಶ ನಾಯಿಕ, ದೇವರಾಜ ಚೌಗಲಾ, ಸಿದ್ದಪ್ಪ ಶಿಳ್ಳಿ, ಯಲ್ಲಪ್ಪ ಹಿರೇಕೋಡಿ, ಅರುಣ ಅತ್ತಿಮರದ, ಶಾಂತಿನಾಥ ಮಗದುಮ್ಮ, ಅಬ್ದುಲ್‌ಗನಿ ದರ್ಗಾ, ಸಂಗೀತಾ ಮಾದರ, ಗೊಡವ್ವ ಅಗಸರ ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.