ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರವೂ ಮುಖ್ಯ: ನಿರಂಜನ್ ಎಂ.ಎ.

| Published : Jan 08 2025, 12:18 AM IST

ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರವೂ ಮುಖ್ಯ: ನಿರಂಜನ್ ಎಂ.ಎ.
Share this Article
  • FB
  • TW
  • Linkdin
  • Email

ಸಾರಾಂಶ

ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮವನ್ನು ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ವಕೀಲ, ಬಾರ್ ಕೌನ್ಸಿಲ್ ಅಧ್ಯಕ್ಷ ನಿರಂಜನ್ ಎಂ.ಎ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರಿಗೂ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಕಾಳಜಿಯ ಕಣ್ಣಿಟ್ಟಿರಬೇಕು ಎಂದು ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ವಕೀಲ, ಬಾರ್ ಕೌನ್ಸಿಲ್ ಅಧ್ಯಕ್ಷ ನಿರಂಜನ್ ಎಂ.ಎ ಹೇಳಿದ್ದಾರೆ.

ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಉತ್ತಮ ಗೆಳೆಯರ ಒಡನಾಟ ಹೊಂದಿರಬೇಕು ಎಂದರು.

ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಗಳು ಮತ್ತು ಪಾಠದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಟ್ರೋಫಿ, ಬಹುಮಾನ, ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳ ಪೋಷಕರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ , ಪಿರಮಿಡ್ ಪ್ರದರ್ಶನ ಪ್ರಸ್ತುತಗೊಂಡವು.

ಪ್ರಾಂಶುಪಾಲ ಸುಮಿತ ಎಂ.ಎಂ. ಸಂಸ್ಥೆಯ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಾಧನೆಯ ವಾರ್ಷಿಕ ವರದಿ ಮಂಡಿಸಿದರು.

ವಿದ್ಯಾಸಂಸ್ಥೆ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಡಿ. ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಎಂ.ಎಂ ಅರುಣ್ ಅಪ್ಪಚ್ಚು , ನಿರ್ದೇಶಕರಾದ ಬಡುವಂಡ ನೀಲಮ್ಮ ಮುದ್ದಪ್ಪ, ಮುಂಡಂಡ ನೀಲವ್ವ ಮುತ್ತಣ್ಣ, ಸದಸ್ಯರಾದ ಬಡುವಂಡ ಕುನ್ನು ಅಪ್ಪಚ್ಚು, ಚೇದ್ರಿಮಡ ರೂಪ ಸೋಮಯ್ಯ , ಉಪಪ್ರಾಂಶುಪಾಲ ಎಂ.ಡಿ ಹೇಮಾವತಿ ಮತ್ತಿತರರಿದ್ದರು.