ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು

| Published : Apr 03 2024, 01:31 AM IST

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಹಗಲು-ರಾತ್ರಿ ಎನ್ನದೇ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆ ಕಾಪಾಡಲು ಪೊಲೀಸ್ ಸಿಬ್ಬಂದಿ ಸದಾ ಕಾರ್ಯನಿರತರಾಗಿರುತ್ತಾರೆ

ಗದಗ: ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಟಿ.ಫೈಜುದ್ದೀನ್ ಹೇಳಿದರು.

ಅವರು ಮಂಗಳವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾ ಸಶಸ್ತ್ರ ಪೊಲೀಸ್ ಘಟಕ ಮಲ್ಲಸಮುದ್ರ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ನಿವೃತ್ತರ ಸೇವಾ ಸಂಸ್ಮರಣೆ ಮತ್ತು ಗೌರವ ಸಮರ್ಪಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಇಲಾಖೆಯಲ್ಲಿ ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರು ಮಾನಸಿಕ ಹಾಗೂ ದೈಹಿಕ ಸದೃಢವಾಗಿರುವುದು ಅವಶ್ಯಕವಾಗಿದೆ. ಅವರು ತಮ್ಮ ಸೇವಾ ನಿರತ ದಿನಗಳನ್ನು ಸ್ಮರಿಸಿಕೊಳ್ಳುತ್ತಾ ಪೊಲೀಸ್‌ ಇಲಾಖೆ ಹಾಗೂ ಮೇಲಾಧಿಕಾರಿಗಳಿಗೆ ಇನ್ನೂ ಹೆಚ್ಚಿನ ಗೌರವ ತರುವ ಕಾರ್ಯ ಮಾಡಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಹಗಲು-ರಾತ್ರಿ ಎನ್ನದೇ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆ ಕಾಪಾಡಲು ಪೊಲೀಸ್ ಸಿಬ್ಬಂದಿ ಸದಾ ಕಾರ್ಯನಿರತರಾಗಿರುತ್ತಾರೆ. 1965 ರಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷವೂ ಏ.2 ರಂದು ರಾಜ್ಯದ ಎಲ್ಲ ಪೊಲೀಸ್ ಘಟಕಗಳಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳಲು ಹಾಗೂ ನಿವೃತ್ತಿ ನಂತರ ಅವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ವರ್ಷ ಪೊಲೀಸ್‌ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜ ಮಾರಾಟ ಮಾಡಿ ಬಂದ ಹಣದಲ್ಲಿ ಶೇ. 50% ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಮತ್ತು ಶೇ. 50% ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಿ ಈ ನಿಧಿಯನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ ಮಂಜೂರಿಸುವ ಸಲುವಾಗಿ ವಿನಿಯೋಗಿಸಲಾಗುತ್ತದೆ.

ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ಸಮಿತಿ ಸಭೆ ಕರೆದು ಸದರಿ ಸಭೆಗಳಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯವರ ಕುಂದು ಕೊರತೆ ಆಲಿಸಿ, ಕುಂದುಕೊರತೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರು ಕ್ಯಾಂಟೀನ್ ಉಪಯೋಗ ಪಡೆಯುತ್ತಿದ್ದು, ಈ ಸದುಪಯೋಗ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಸಹ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರಸಕ್ತ ವರ್ಷ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಿಂದ 39 ಜನ ನಿವೃತ್ತ ಅಧಿಕಾರಿ, ಸಿಬ್ಬಂದಿಯವರಿಗೆ 127950 ಗಳ ವೈದ್ಯಕೀಯ ಧನ ಸಹಾಯ ಪಾವತಿಸಲಾಗಿದೆ ಮತ್ತು ಮರಣ ಹೊಂದಿದ 22 ಜನ ನಿವೃತ್ತ ಪೊಲೀಸ್ ಅಧಿಕಾರಿಗಳ ಅಂತ್ಯಸಂಸ್ಕಾರಕ್ಕೆ ₹220000 ಧನ ಸಹಾಯ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೇವಾ ನಿವೃತ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಡಿಎಸ್ಪಿ ಡಿ.ಬಿ. ಇನಾಮದಾರ, ಸೇರಿದಂತೆ ಸಿಬ್ಬಂದಿ,ಗಣ್ಯರು ಹಾಜರಿದ್ದರು.

ಡಿಎಸ್ ಪಿ ಡಿ.ಎಸ್ ಧನಗರ ಸ್ವಾಗತಿಸಿದರು. ಡಿಎಸ್‍ಪಿ ಪ್ರಭುಗೌಡ ಕಿರೆದಳ್ಳಿ ವಂದಿಸಿದರು. ಎಂ.ಟಿ. ಭಟ್ ನಿರೂಪಿಸಿದರು.