ಸಾರಾಂಶ
ಸಾಕಷ್ಟು ಉಳ್ಳವರೇ ಸಮಾಜಸೇವೆ ಮಾಡಲು ಇಂದು ಮುಂದೆ ಬರುವುದಿಲ್ಲ. ಆದರೆ, ರಾಜಧಾನಿ ಬೆಂಗಳೂರಿನಿಂದ ಬಂದು ಪತ್ರಿಕಾ ವಿತರಕರ ಕಷ್ಟ- ಸುಖ ವಿಚಾರಿಸಿ, ರೈನ್ ಕೋಟ್ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ, ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ರಾಮಸ್ವಾಮಿ ಹಾಗೂ ಪದಾಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕನ್ನಡ ಕಟ್ಟುವ ಕಾಯಕದಲ್ಲಿ ಪತ್ರಿಕಾ ವಿತರಕರ ಪಾತ್ರ ಗಣನೀಯವಾಗಿದ್ದು, ಮಳೆ, ಚಳಿ ಎನ್ನದೇ ಮುಂಜಾನೆಯೇ ಮನೆ, ಮನೆಗೆ ತೆರಳಿ ಪತ್ರಿಕೆ ತಲುಪಿಸುವ ಹುಡುಗರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಶಾಂತಾರಾಮಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ೨೫ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಉಚಿತವಾಗಿ ರೈನ್ ಕೋಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಕೂಡ ಕನ್ನಡವನ್ನು ಅನ್ನದ ಭಾಷೆಯಾಗಿ ಬಳಸಿಕೊಳ್ಳಬೇಕು. ವಿಶ್ವದಲ್ಲೇ ಅತ್ಯಂತ ತಂತ್ರಜ್ಞಾನಿಗಳು ಎಂದು ಹೆಸರುವಾಸಿಯಾಗಿರುವ ಜಪಾನರು ಹೇಗೆ ತಮ್ಮ ಮಾತೃಭಾಷೆಯಲ್ಲೇ ವ್ಯವಹಾರ ಮಾಡುವರೋ ಅಂತೆಯೇ ಕನ್ನಡಿಗರಾದ ನಾವೂ ಸಹ ನಮ್ಮ ಭಾಷೆಯನ್ನು ಜಗದಗಲ ಪಸರಿಸಲು ಪಣ ತೊಡಬೇಕು ಎಂದರು.ರಾಮನಗರ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಸಾಕಷ್ಟು ಉಳ್ಳವರೇ ಸಮಾಜಸೇವೆ ಮಾಡಲು ಇಂದು ಮುಂದೆ ಬರುವುದಿಲ್ಲ. ಆದರೆ, ರಾಜಧಾನಿ ಬೆಂಗಳೂರಿನಿಂದ ಬಂದು ಪತ್ರಿಕಾ ವಿತರಕರ ಕಷ್ಟ- ಸುಖ ವಿಚಾರಿಸಿ, ರೈನ್ ಕೋಟ್ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮೀದೇವಿ, ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ರಾಮಸ್ವಾಮಿ ಹಾಗೂ ಪದಾಧಿಕಾರಿಗಳು ನಿಜಕ್ಕೂ ಅಭಿನಂದನಾರ್ಹರು ಎಂದರು.
ಬನಶಂಕರಿ ಮಹಿಳಾ ಸಮಾಜದ ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಭಾನುಮತಿ ಎ.ನಾರಾಯಣ್, ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್ ಉಪಾಧ್ಯಕ್ಷೆ ರಂಗಲಕ್ಷ್ಮೀ ಸಿದ್ದರಾಜು, ನಿವೃತ್ತ ಅಧಿಕಾರಿ ಸಿ.ಎಸ್.ಶ್ರೀಕಂಠಯ್ಯ, ಶಿಕ್ಷಕಿ ಶಾರದಾ ನಾಗೇಶ್ ಇದ್ದರು.