ಹಾವೇರಿ: ಕಲಾವಿದನ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಸ್ವಯಂಶಕ್ತಿ ಹಾಗೂ ಸಹಕಾರ ಎರಡೂ ಮಹತ್ವದ ಪಾತ್ರ ವಹಿಸುತ್ತವೆ. ಕಲಾವಿದನ ಮನಸ್ಸಿನ ಮೇಲೆ ಆತ ವಾಸಿಸುವ ಪರಿಸರ ಪ್ರಭಾವ ಬೀರುತ್ತದೆ. ಇದರಿಂದಲೇ ಉತ್ತಮ ಕಲಾಕೃತಿಗಳು ಹೊರಹೊಮ್ಮಲು ಸಾಧ್ಯ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಹಾಗೂ ಶಿಲ್ಪಕಲಾವಿದ ಹರೀಶ ಮಾಳಪ್ಪನವರ ಹೇಳಿದರು.
ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಭಾನುವಾರ ಆಯೋಜಿಸಿದ್ದ ಗದಗ ಜಿಲ್ಲೆಯ ಹಾರೋಗೇರಿ ಗ್ರಾಮದ ಯುವ ಕಲಾವಿದ ತಿಮ್ಮನಗೌಡ ಪಾಟೀಲ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಕಲಾವಿದನಿಗೆ ತನ್ನ ಕಲೆಯ ಮೇಲೆ ನಂಬಿಕೆ ಹಾಗೂ ನಿರಂತರ ಪರಿಶ್ರಮ ಇರಬೇಕು. ತನ್ನ ಸುತ್ತಲಿನ ಬದುಕು, ಪರಿಸರ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಕಲೆಯ ಮೂಲಕ ಅಭಿವ್ಯಕ್ತಿಗೊಳಿಸಿದಾಗ ಕಲಾಕೃತಿಗೆ ವಿಶಿಷ್ಟತೆ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಡಾ. ಶಮಂತಕುಮಾರ ಮಾತನಾಡಿ, ಕಲಾವಿದರು ಬೆಳೆದಂತೆ ಸಮಾಜದಲ್ಲಿ ಸಂಸ್ಕಾರವೂ ಬೆಳೆಯುತ್ತದೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಕಲಾವಿದರು ಸಮಾಜದ ಉನ್ನತಿಗಾಗಿ ಶ್ರಮಿಸುತ್ತಾರೆ. ಅವರ ಕಲಾ ಸೇವೆ ಸಮಾಜದ ಚಿಂತನೆಗೆ ಹೊಸ ಆಯಾಮ ನೀಡುತ್ತದೆ ಎಂದರು.ಪತ್ರಕರ್ತ ನಾರಾಯಣ ಹೆಗಡೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಹೊರಬಂದು ಬದುಕನ್ನು ಸೂಕ್ಷ್ಮವಾಗಿ ನೋಡುವಂತೆ ಮಾಡುವ ಶಕ್ತಿ ಕಲೆಗೆ ಇದೆ. ಕಲಾವಿದ ತನ್ನ ಒಳಗಣ್ಣಿನ ಮೂಲಕ ಸಮಾಜದ ಕಣ್ಣು ತೆರೆಸುತ್ತಾನೆ. ತಿಮ್ಮನಗೌಡ ಪಾಟೀಲ ಅವರ ಕಲಾಕೃತಿಗಳಲ್ಲಿ ಇಂತಹ ಅನುಭವ ಕಾಣಸಿಗುತ್ತದೆ ಎಂದರು.
ಯುವ ಉದ್ಯಮಿ ಗುಡ್ಡನಗೌಡ ಅಂದಾನಿಗೌಡ್ರ ಮಾತನಾಡಿ, ದಿನನಿತ್ಯದ ಜಂಜಾಟದ ಬದುಕಿನಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಕಲೆ ಸಹಕಾರಿಯಾಗಿದೆ. ಕಲಾಕೃತಿಗಳನ್ನು ಮೊಬೈಲ್‌ನಲ್ಲಿ ನೋಡುವುದಕ್ಕಿಂತ ನೇರವಾಗಿ ವೀಕ್ಷಿಸಿದಾಗ ಅದರ ಮೂಲ ಆಶಯ ಹಾಗೂ ಕಲಾವಿದನ ಭಾವನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಮಂಗಳೂರು ಮಾತನಾಡಿ, ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಿದಾಗ ಮಾತ್ರ ಕಲಾವಿದ ಇತಿಹಾಸದಲ್ಲಿ ಉಳಿಯುತ್ತಾನೆ. ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಸಮಾಜಕ್ಕೆ ನಿರಂತರ ಕೊಡುಗೆ ನೀಡುವುದರಿಂದ ಅವರ ಕೃತಿಗಳು ಶಾಶ್ವತವಾಗಿ ಉಳಿಯುತ್ತವೆ. ಇದೇ ರೀತಿ ಪ್ರತಿಯೊಬ್ಬರೂ ತಮ್ಮ ಅಂತ್ಯಕಾಲದಲ್ಲಿ ನೇತ್ರದಾನ ಮಾಡುವ ಮೂಲಕ ಶಾಶ್ವತವಾಗಿ ಸಮಾಜದೊಂದಿಗೆ ಬೆಸೆದುಕೊಳ್ಳಬಹುದು ಎಂದರು.
ಧಾರವಾಡದ ಕಲಾವಿದ ಕುಮಾರ ಕಾಟೇನಹಳ್ಳಿ, ಬ್ಯಾಡಗಿಯ ಸುಭಾಸ, ಎಂ.ಡಿ. ಹೊನ್ನಮ್ಮನವರ, ರಾಣಿಬೆನ್ನೂರಿನ ಶಿವರಾಜ ಹಂಚಿನಮನಿ, ಮಂಜುನಾಥ ಅಂಗಡಿ, ಜಗದೀಶ ಚೌಟಗಿ, ಹಂಸಭಾವಿಯ ಎಸ್. ಹನುಮಂತಪ್ಪ, ಚಂದ್ರಪ್ಪ ರುದ್ರಾಕ್ಷಿ, ಹುಬ್ಬಳ್ಳಿಯ ಅಮೃತಪ್ಪ ಮೊರಬಾದ, ವಿಜಯಪುರದ ಅಶೋಕ ನೆಲಗಿ, ಶಿವನಗೌಡ, ಪರಶುರಾಮ ಲಮಾಣಿ, ಫಕ್ಕೀರೇಶ ಹುಳಿಕುಪ್ಪಿ, ಶಿವರಾಜ ಮೆಳ್ಳಾಗಟ್ಟಿ ಸೇರಿದಂತೆ ಕಲಾವಿದರು ಹಾಗೂ ಗದಗ ಜಿಲ್ಲೆಯ ಹಾರೋಗೇರಿಯ ತಿಮ್ಮನಗೌಡ ಪಾಟೀಲ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.ಮನೋಜ ಪ್ರಾರ್ಥಿಸಿದರು. ಹಂಚಿನಮನಿ ಆರ್ಟ್ ಗ್ಯಾಲರಿಯ ಸಂಚಾಲಕ ಕರಿಯಪ್ಪ ಹಂಚಿನಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಶಿಕ್ಷಕ ಪರಮೇಶ ಹುಲ್ಮನಿ ವಂದಿಸಿದರು. ನೇತ್ರಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.