ಪರಿಪೂರ್ಣ ಶಾಲೆ ನಿರ್ಮಾಣಕ್ಕೆ ಶಿಕ್ಷಕರ, ಸಮುದಾಯದ ಪಾತ್ರ ಮುಖ್ಯ

| Published : Feb 21 2024, 02:01 AM IST

ಪರಿಪೂರ್ಣ ಶಾಲೆ ನಿರ್ಮಾಣಕ್ಕೆ ಶಿಕ್ಷಕರ, ಸಮುದಾಯದ ಪಾತ್ರ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವ ಮುಖ್ಯಸ್ಥರಿಗೆ ಮೊದಲು ನಮ್ಮ ಶಾಲೆ ಹೇಗಿರಬೇಕು ಎಂಬ ಉನ್ನತ ಕಲ್ಪನೆ ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪರಿಪೂರ್ಣ ಶಾಲೆ ನಿರ್ಮಾಣದಲ್ಲಿ ಆ ಸಂಸ್ಥೆಯ ಆಡಳಿತ ಮಂಡಳಿಯವರು, ಶಿಕ್ಷಕರು ಮತ್ತು ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ವಿಜಯಪುರದ ಚಾಣಕ್ಯ ಅಕಾಡೆಮಿ ಮುಖ್ಯಸ್ಥ ಎನ್.ಎಂ. ಬಿರಾದಾರ ಹೇಳಿದರು.

ನಗರದ ಹೊರವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ, ವಿಕಾಸ ಅಕಾಡೆಮಿ ಕಲಬುರಗಿ ಹಾಗೂ ಶಾಲೆ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸರ್ಕಾರಿ, ಅನುದಾನಿತ-ಅನುದಾನರಹಿತ ಶಾಲೆಗಳ ಮುಖ್ಯಗುರುಗಳಿಗೆ ಆಡಳಿತ ಮಂಡಳಿಯವರಿಗೆ ಶಿಕ್ಷಣ ಕುರಿತು-ಒಂದು ಬೆಳಕು ಎಂಬ ಸ್ನೇಹ ಸಮ್ಮೇಳನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವ ಮುಖ್ಯಸ್ಥರಿಗೆ ಮೊದಲು ನಮ್ಮ ಶಾಲೆ ಹೇಗಿರಬೇಕು ಎಂಬ ಉನ್ನತ ಕಲ್ಪನೆ ಹೊಂದಿರಬೇಕು. ಅಲ್ಲದೇ ದೇಶದಲ್ಲಿರುವ ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿ, ವೀಕ್ಷಿಸಿ ಅಧ್ಯಯನ ಮಾಡಬೇಕು. ಶಿಕ್ಷಣ ಕ್ಷೇತ್ರ ಪವಿತ್ರ ಕ್ಷೇತ್ರ, ಇದನ್ನು ಮುನ್ನೆಡೆಸಲು ಅವರಲ್ಲಿ ಹಾಗೂ ಶಿಕ್ಷಕರಲ್ಲಿ ಕಠಿಣ ತಪಸ್ಸು ಮನೋಭಾವನೆ ಇಟ್ಟುಕೊಂಡು ಕಾರ್ಯಾರಂಭ ಮಾಡಿ, ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಖಂಡಿತ ಆಯಾ ಭಾಗಗಳ ಸಮುದಾಯದ ಜನರನ್ನು ಆಕರ್ಷಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕಗಳ ಬೋಧನೆಗಳ ಜೊತೆಗೆ ಇನ್ನಿತರ ಕಲೆ, ಭಾಷಣ ಸ್ಪರ್ಧೆ, ರಸ ಪ್ರಶ್ನೆ ಕಾರ್ಯಕ್ರಮ, ಕ್ರೀಡೆಗಳು, ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಅಂದಾಗ ಮಾತ್ರ ಮಗು ಸಮಗ್ರವಾಗಿ ಬೆಳವಣಿಗೆ ಸಾಧಿಸುತ್ತದೆ ಎಂದರು.

ಕಲಬುರಗಿ ವಿಕಾಸ ಅಕಾಡೆಮಿ ಮುಖ್ಯಸ್ಥರಾದ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ನಾನು ಈ ಭಾಗದಲ್ಲಿ ಕಂಡಂತಹ ಅತ್ಯುತ್ತಮ ಶಾಲೆಗಳಲ್ಲಿ ಆರ್ಯಭಟ್ಟ ಶಾಲೆ ಒಂದಾಗಿದೆ. ಇನ್ನೂ ಸಾಧನೆ ಮಾಡಬೇಕಾಗಿರುವುದು ಬಹಳಷ್ಟಿದೆ. ಅವರಿಗೆ ನಮ್ಮ ಮಾರ್ಗದರ್ಶನ ಸದಾ ಸಿಗಲಿದೆ. ಇಲ್ಲಿ ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆಯಿಲ್ಲ. ಅದರ ಸದ್ಭಳಕೆಯಾದರೆ ಖಂಡಿತ ಬದಲಾವಣೆ ಕಾಣಲು ಸಾದ್ಯ ಎಂದು ಹೇಳಿದರು.

2025ರ ಜ.29ರಿಂದ ಫೆ.6ರವರೆಗೆ ಸೇಡಂನ ಹತ್ತಿರವಿರುವ ಪ್ರಕೃತಿ ನಗರದ 240 ಎಕರೆ ಪ್ರದೇಶದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿಯ ಹಬ್ಬ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ-7 ಐತಿಹಾಸಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಮಹನೀಯರು ಇಲ್ಲಿಗೆ ಆಗಮಿಸಿ, ತಮ್ಮ ಅನುಭವದ ನುಡಿ ನೀಡಲಿದ್ದಾರೆ. ಕಾರಣ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಜನರು ಭಾಗವಹಿಸಿ, ಬದಲಾವಣೆಗೆ ಪ್ರೇರಣೆ ಪಡೆಯಬೇಕು ಎಂದು ಮನವಿ ಮಾಡಿದರು.

ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಮಹೇಶ ಮಾಶ್ಯಾಳ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಪ್ರೀತಿ-ವಿಶ್ವಾಸದಿಂದ ಬೆರೆಯಿರಿ. ಅವರಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಅವು ನಿಮ್ಮ ಗಮನಕ್ಕೆ ಬರುತ್ತವೆ, ಆ ಸಮಯದಲ್ಲಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅನಾವರಣಕ್ಕೆ ಅವಕಾಶ ಮಾಡಿ ಕೊಡಿ, ಖಂಡಿತ ಅವರ ಪ್ರತಿಭೆ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು.

ಸಮಾರಂಭದ ಸಾನ್ನಿಧ್ಯವನ್ನು ಸೇಡಂನ ಸದಾಶಿವ ಸ್ವಾಮಿಜಿ ವಹಿಸಿ, ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಧಾಕರರಡ್ಡಿ ಪಾಟೀಲ್ ಅನಪೂರ, ಪ್ರಾಂಶುಪಾಲ ಪಿ. ಅರವಿಂದಾಕ್ಷಣ, ವೆಂಕಟರಡ್ಡಿ ಪಾಟೀಲ್, ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಅನುರಾಧ ಪಾಟೀಲ್ ಸೇಡಂ ಮಾತನಾಡಿದರು. ರೇವಣಸಿದ್ದಪ್ಪ ಜಲಾದೆ ಬೀದರ ಸ್ವಾಗತಿಸಿದರೆ, ವಿಶ್ವನಾಥ ಕೋರಿ ವಂದಿಸಿದರು.