ಸಾರಾಂಶ
ಯಾವತ್ತೂ ಯಾವ ತಾಯಿ ಮತ್ತು ಶಿಕ್ಷಕರಿಗೆ ಮಕ್ಕಳ ಮೇಲೆ ದ್ವೇಷವಿರುವುದಿಲ್ಲ, ಇರಬಾರದು. ಯಶಸ್ವಿ ಪ್ರಜೆಗಳನ್ನು ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಯಲ್ಲಾಪುರ: ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗುತ್ತಿದೆ. ಒಬ್ಬ ವೈದ್ಯ ನಿರ್ಲಕ್ಷಿಸಿದರೆ ರೋಗಿ ಸಾವಿಗೀಡಾಗಬಹುದು. ಆದರೆ, ಅದಕ್ಕೂ ಹೆಚ್ಚಿನ ಪ್ರಭಾವ ಹೊಂದಿರುವ ಶಿಕ್ಷಕರು ಸಣ್ಣ ಲೋಪ ಮಾಡಿದರೂ ಮಕ್ಕಳ ಭವಿಷ್ಯವೇ ನಾಶವಾದೀತು. ಹೀಗಾಗಿ ಶಿಕ್ಷಕರು ವೃತ್ತಿಯ ಗೌರವ, ಘನತೆಯನ್ನು ಕಾಪಾಡಬೇಕೆಂದು ಶಾಸಕ ಶಿವರಾಮ ಹೆಬ್ಬಾರ ಮನವಿ ಮಾಡಿದರು.
ಸೆ. ೫ರಂದು ಪಟ್ಟಣದ ವೇದವ್ಯಾಸ ಕಲ್ಯಾಣಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಂಕೋಲಾ ಅರ್ಬನ್ ಕೋ ಆಪ್ ಬ್ಯಾಂಕ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಕೆಲವು ವ್ಯಕ್ತಿಗಳು ತಪ್ಪು ಮಾಡಿದರೆ ಶಿಕ್ಷಕರನ್ನು ದೂಷಿಸುತ್ತೇವೆ. ಆದರೆ, ಪಾಲಕರ ಹೊಣೆಯೂ ಅಷ್ಟೇ ಇದೆ. ಯಾವತ್ತೂ ಯಾವ ತಾಯಿ ಮತ್ತು ಶಿಕ್ಷಕರಿಗೆ ಮಕ್ಕಳ ಮೇಲೆ ದ್ವೇಷವಿರುವುದಿಲ್ಲ, ಇರಬಾರದು. ಯಶಸ್ವಿ ಪ್ರಜೆಗಳನ್ನು ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದರು. ರಾ.ವಿ.ಯೋ.ಮ.ಅ. ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ೨೧ನೇ ಶತಮಾನದಲ್ಲಿದ್ದೇವೆ. ಹೆಚ್ಚಿನ ಮಕ್ಕಳು ಚಟಕ್ಕೆ ದಾಸರಾಗುತ್ತಿದ್ದಾರೆ. ಪಾಲಕರು ಮಕ್ಕಳ ಮೇಲೆ ನಿಗಾ ಇಡುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಶಿಕ್ಷಕರ ಮೇಲೆ ಹೆಚ್ಚಿನ ಹೊಣೆಯಿದೆ. ಪ್ರತಿ ವಿದ್ಯಾರ್ಥಿಯ ಚಲನವಲನ, ನಡತೆ ಗಮನಿಸಬೇಕು ಎಂದರು. ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ನೇತೃತ್ವದಲ್ಲಿ ಉತ್ತಮ ಶಿಕ್ಷಕರ ತಂಡವಿದೆ. ಶಿಕ್ಷಕರು ತಮ್ಮನ್ನು ತಾವು ದಹಿಸಿಕೊಂಡು ಮಕ್ಕಳಿಗೆ ಬೆಳಕು ನೀಡುವ ದೀಪದಂತೆ ಕಾರ್ಯನಿರ್ವಹಿಸಬೇಕು ಎಂದರು.ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾದ ಸುರೇಶ ನಾಯ್ಕ, ಶ್ರೀಕಾಂತ ವೈದ್ಯ, ಗಾಯತ್ರಿ ಗದ್ದೆಮನೆ, ಪ್ರೌಢ ವಿಭಾಗದಲ್ಲಿ ವೀರಭದ್ರ ಭಟ್ಟ, ಡಾ. ನವೀನಕುಮಾರ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು. ೨೪ ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಪಂ ಉಪಾಧ್ಯಕ್ಷ ಅಮಿತ ಅಂಗಡಿ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ನಿರ್ದೇಶಕ ಪ್ರಕಾಶ ಕುಂಜಿ, ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಂತೋಷ ಜಿಗಳೂರು, ಅಕ್ಷರ ದಾಸೋಹ ಮುಖ್ಯಸ್ಥ ಶ್ರೀರಾಮ ಹೆಗಡೆ, ಸಹಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಸಿ.ಎಸ್. ಉಪಸ್ಥಿತರಿದ್ದರು.ಸುಜಯ ಧುರಂದರ ಪ್ರಾರ್ಥಿಸಿದರು. ಶಿಕ್ಷಕಿಯರಿಂದ ನಡೆದ ನಾಡಗೀತೆಯ ನಂತರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ, ಭಾಸ್ಕ ನಾಯ್ಕ, ಸುಮಂಗಲಾ ಭಟ್ಟ ನಿರ್ವಹಿಸಿದರು.