ರೈತರ ಅಭಿವೃದ್ದಿಗೆ ಸಹಕಾರಿ ಕ್ಷೇತ್ರದ ಪಾತ್ರ ದೊಡ್ಡದಾಗಿದ್ದು, ಸಹಕಾರಿ ಕ್ಷೇತ್ರದ ಪ್ರಗತಿಗೂ ರೈತರ ಸಹಕಾರ ಅಷ್ಟೇ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ರೋಣ

ರೈತರ ಅಭಿವೃದ್ದಿಗೆ ಸಹಕಾರಿ ಕ್ಷೇತ್ರದ ಪಾತ್ರ ದೊಡ್ಡದಾಗಿದ್ದು, ಸಹಕಾರಿ ಕ್ಷೇತ್ರದ ಪ್ರಗತಿಗೂ ರೈತರ ಸಹಕಾರ ಅಷ್ಟೇ ಮುಖ್ಯವಾಗಿದೆ ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ರೋಣ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕ್‌ನ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ರೈತರ ಹಾಗೂ ಕೃಷಿ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಪಿ.ಎಲ್.ಡಿ ಬ್ಯಾಂಕ್‌ಗಳು ಬೆನ್ನೆಲುಬಾಗಿ ನಿಂತಿವೆ. ಕೃಷಿ ಸಾಲ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ರೈತರಿಗೂ ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು.‌ ರೋಣ ಪಿಎಲ್.ಡಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಶೇ. 80ರಷ್ಟು ಪ್ರಗತಿ ಸಾಧಿಸಿದ್ದು, ಮುಂದಿನ ವರ್ಷ ಶೇ.85 ಕ್ಕೂ ಹೆಚ್ಚು ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಗಳಲ್ಲಿ ಪಡೆದ ಸಾಲ ಮರು ಪಾವತಿಯು ಅತೀ ಮುಖ್ಯವಾಗಿದೆ ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಸಹಕಾರ ವಲಯವು ರೈತರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮೂಲಕ ತೋಣ ಪಿ.ಎಲ್.ಡಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ರೈತರ ಹಿತದೃಷ್ಟಿಯಿಂದ ಶ್ರಮಿಸುತ್ತಿರುವುದು ಶ್ಲಾಘನೀಯ. ಪಾರದರ್ಶಕತೆ ಇದ್ದರೆ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ ಎಂದರು.

​ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಬ್ಯಾಂಕಿನ ಪ್ರಸಕ್ತ ಸಾಲಿನ ಪ್ರಗತಿ, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳ ಕುರಿತು ಸದಸ್ಯರಿಗೆ ವಿವರಣೆ ನೀಡಿದರು.

ಪಿಕಾರ್ಡ್ ಬ್ಯಾಂಕ್ ರಾಜ್ಯ ನಿರ್ದೇಶಕ ಯು.ಟಿ. ದಾಸನೂರ ಮಾತನಾಡಿದರು.

ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ರಮೇಶ ಪಲ್ಲೇದ, ವೀರಣ್ಣ ಶೆಟ್ಟರ ಬಸವರಾಜ ನವಲಗುಂದ, ಪ್ರಭು ಮೇಟಿ, ಪಿ.ಬಿ. ಅಳಗವಾಡಿ ರೂಪಾ ಅಂಗಡಿ, ರವಿ ಸಂಗನಬಶೆಟ್ಟರ, ನಿಂಗಪ್ಪ ಬದಾಮಿ, ಯೂಸೂಫ್ ಇಟಗಿ, ಎ.ಐ. ಮಲ್ಲನಗೌಡ್ರ, ವಿಶ್ವನಾಥ ಜಿಡ್ಡಿಬಾಗೀಲ, ಅಂದಪ್ಪ ಬಿಚ್ಚೂರ ಮುಂತಾದವರಿದ್ದರು. ಬಿ.ಎಸ್. ಕರಿಗೌಡ್ರ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಪಾಟೀಲ ನಿರೂಪಿಸಿದರು. ಬ್ಯಾಂಕ್ ವ್ಯವಸ್ಥಾಪಕ ನೀಲಪ್ಪ ಹರಿಜನ ವಂದಿಸಿದರು.