ಪರಿಸರ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ ಪ್ರಮುಖ: ರಾಜಶೇಖರ ಹಿಟ್ನಾಳ

| Published : Oct 23 2024, 12:39 AM IST

ಪರಿಸರ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ ಪ್ರಮುಖ: ರಾಜಶೇಖರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಮನುಕುಲಕ್ಕೆ ಪ್ರಕೃತಿಯ ಕೊಡುಗೆಯಾದ ವನ್ಯಜೀವಿಗಳು ಭೂಮಿಯ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರಂತರವಾಗಿ ಸಹಾಯ ಮಾಡುತ್ತಿವೆ.

ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ನಡಿಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪರಿಸರ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ 70ನೇ ವನ್ಯಜೀವಿ ಸಪ್ತಾಹ-2024ರ ಅಂಗವಾಗಿ ಕೊಪ್ಪಳ ಪ್ರಾದೇಶಿಕ ಅರಣ್ಯ ವಿಭಾಗದಿಂದ ಮಂಗಳವಾರ ನಗರದ ಶ್ರೀ ಗವಿಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವನ್ಯಜೀವಿ ದೇವರ ಅದ್ಭುತ ಸೃಷ್ಟಿ. ದೇವರು ವಿಶ್ವವನ್ನು ಮನುಷ್ಯರಿಗಾಗಿ ಮಾತ್ರ ಸೃಷ್ಟಿಸಿಲ್ಲ. ಮನುಕುಲಕ್ಕೆ ಪ್ರಕೃತಿಯ ಕೊಡುಗೆಯಾದ ವನ್ಯಜೀವಿಗಳು ಭೂಮಿಯ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರಂತರವಾಗಿ ಸಹಾಯ ಮಾಡುತ್ತಿವೆ. ಎಲ್ಲ ಜೀವಿಗಳ ನಡುವೆ ಆರೋಗ್ಯಕರ ಪರಿಸರ ಸಮತೋಲನ ಕಾಪಾಡಿಕೊಳ್ಳಲು ವನ್ಯಜೀವಿ ಸಂರಕ್ಷಣೆ ಮುಖ್ಯವಾಗಿದೆ. ಈ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯು ಆಹಾರ ಸರಪಳಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ ಮತ್ತು ಅವು ತಮ್ಮದೇ ಆದ ವಿಶೇಷ ರೀತಿಯಲ್ಲಿ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತವೆ. ಈ ಹಿನ್ನೆಲೆ ವನ್ಯಜೀವಿಗಳ ರಕ್ಷಣೆಯಾಗಬೇಕು. ಇಂದಿನ ಮಕ್ಕಳು ಈ ದೇಶದ ಭವ್ಯ ಪ್ರಜೆಗಳಾಗಿದ್ದು, ಮಕ್ಕಳು ವನ್ಯಜೀವಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಬೇಕು ಹಾಗೂ ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ವನ್ಯಜೀವಿ ಅಥವಾ ವನ್ಯಜೀವಿಗಳ ಒಂದು ಭಾಗವು ಈ ಭೂಮಿಯಿಂದ ಕಣ್ಮರೆಯಾಗಲು ನಾವು ಬಿಡಬಾರದು. ಪ್ರಕೃತಿಯು ತನ್ನದೇ ಆದ ಸಮತೋಲನ ಕಾಯ್ದುಕೊಳ್ಳುತ್ತದೆ. ಜಿಲ್ಲೆಯಲ್ಲಿ ಕರಡಿಧಾಮ ಹಾಗೂ ತೋಳಧಾಮಗಳು ಇವೆ. ಅಲ್ಲದೇ ವಿವಿಧ ಬಗೆಯ ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಇವುಗಳ ಬಗ್ಗೆ ಜನರಿಗೆ ತಿಳಿಸಬೇಕು. ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಅರಣ್ಯ ಇಲಾಖೆಯು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಕಾಡು, ವನ್ಯಜೀವಿಗಳ ನಾಶ, ಅರಣ್ಯ ಪ್ರದೇಶ ಒತ್ತುವರಿ, ವನ್ಯಜೀವಿ ಸಂಘರ್ಷ ಮುಂತಾದ ಕಾರಣಗಳಿಂದ ಒತ್ತಡದಲ್ಲಿದ್ದು, ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಸೆಲ್ಫಿ ಪಾಯಿಂಟ್:

ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಸಂದೇಶವಿರುವ ಸೆಲ್ಫಿ ಪಾಯಿಂಟ್ ಇಡಲಾಗಿತ್ತು. ಗಣ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೆಲ್ಫಿ ಪಾಯಿಂಟ್ ಮೂಲಕ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ನಡಿಗೆ:

ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ನಡಿಗೆಯು ಶ್ರೀ ಗವಿಮಠದಿಂದ ಆರಂಭಗೊಂಡು ಬಸವೇಶ್ವರ ವೃತ್ತ (ಗಂಜ್ ಸರ್ಕಲ್), ಅಶೋಕ ಸರ್ಕಲ್, ಬಸ್‌ನಿಲ್ದಾಣದ ಮಾರ್ಗವಾಗಿ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ನಡಿಗೆಯಲ್ಲಿ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡು ವನ್ಯಜೀವಿ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಗಮನ ಸೆಳೆದ ಸ್ತಬ್ಧಚಿತ್ರ:

ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡ ಈ ವಿನೂತನ ಕಾರ್ಯಕ್ರಮದಲ್ಲಿ ವನ್ಯ ಜೀವಿಗಳನ್ನೊಳಗೊಂಡ ಸ್ತಬ್ಧಚಿತ್ರವು ತುಂಬಾ ಆಕರ್ಷಣೀಯವಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಡೊಳ್ಳು ಕುಣಿತ ತಂಡವು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.

ಈ ಸಂದರ್ಭ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್. ಮುಲ್ಲಾ, ಕೊಪ್ಪಳ ವಲಯ ಅರಣ್ಯಾಧಿಕಾರಿ ಸ್ವಾತಿ, ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ, ಕುಷ್ಟಗಿ ವಲಯ ಅರಣ್ಯಾಧಿಕಾರಿ ಶಿವರಾಜ ಮೇಟಿ, ಸಾಮಾಜಿ ವಲಯ ಅರಣ್ಯ ಅಧಿಕಾರಿಗಳಾದ ಗುರನಗೌಡ ಪಾಟೀಲ, ಸತೀಶ ಹಾಗೂ ರಾಘವೇಂದ್ರ ಬಳ್ಳಾರಿ ಸೇರಿದಂತೆ ಜಿಲ್ಲೆಯ ಅರಣ್ಯ ಸಿಬ್ಬಂದಿ, ಶ್ರೀ ಗವಿಸಿದ್ದೇಶ್ವರ ವಸತಿ ನಿಲಯ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.