ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ ಭೂರಸೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಗೃಹ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಹಾಗೂ ಅಕ್ಕ ಪಡೆ ಕಾರ್ಯನಿರ್ವಹಣೆ ಕುರಿತು ನಗರದ ಪೊಲೀಸ್‌ ಕಮೀಷನರ್‌ ಕಚೇರಿಯಲ್ಲಿ ನಡೆದ ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಪಾನ್ ದೇಶದ ದ್ವಿತೀಯ ಮಹಾಯುದ್ಧದ ನಂತರದ ಪ್ರಗತಿಯನ್ನು ಉದಾಹರಿಸಿ, ಮಹಿಳೆಯರು ಸಮಾಜದ ನಿರ್ಮಾಣದಲ್ಲಿ ಸಕ್ರಿಯರಾಗಿದ್ದರೆ ದೇಶದ ಅಭಿವೃದ್ಧಿ ವೇಗವಾಗಿ ಬೆಳೆಯಲಿದೆ. ಮಹಿಳೆ ಹಾಗೂ ಹೆಣ್ಣು ಮಗುವಿನ ಸಂರಕ್ಷಣೆ ಮತ್ತು ಸುರಕ್ಷತೆ ಕುರಿತು ಜಾಗೃತಿ ಅಗತ್ಯವಿದೆ ಎಂದರು.

ರಾಜ್ಯ ಮಟ್ಟದ ಅಕ್ಕ ಪಡೆ ಸಂಯೋಜಕಿ ಶೈನಿ ರಾಜೇಂದ್ರ ಕುಮಾರ, ಅಕ್ಕ ಪಡೆಯ ಉದ್ದೇಶ, ಕಾರ್ಯಪದ್ಧತಿ ಹಾಗೂ ಮಹಿಳಾ-ಮಕ್ಕಳ ರಕ್ಷಣೆಯಲ್ಲಿ ಅದರ ಪಾತ್ರದ ಕುರಿತು ಪ್ರಸ್ತಾವಿಕವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನ್‌ಕುಮಾರ್ ಎಂ.ಎನ್, ಮಹಿಳೆಯರ ಸಬಲೀಕರಣ ಸಮಾಜದ ಶಕ್ತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕಾಂಚನ ಅಮಠೆ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಂಡರು.


ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಂತ್ವನ ಹಾಗೂ ಸಖಿ ಕೇಂದ್ರದ ಸಿಬ್ಬಂದಿ ಹಾಗೂ ಅಕ್ಕ ಪಡೆ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಾರ್ವತಿ ಹೊನವಾಡ ನಿರೂಪಿಸಿ, ಸುಚೇತಾ ಕುಲಕರ್ಣಿ ವಂದಿಸಿದರು.