ಪಕ್ಷ ಉಳಿಸಿ ಬೆಳೆಸುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖ: ಆರ್.ವಿ ದೇಶಪಾಂಡೆ

| Published : Apr 14 2024, 01:47 AM IST

ಸಾರಾಂಶ

ಬಿಜೆಪಿ ಸರ್ಕಾರದಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ಎಂಬುವುದರ ಬಗ್ಗೆ ಹೇಳಲಿ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ಜನರು ತತ್ತರಿಸಿಹೋಗಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಪಕ್ಷ ಉಳಿಸಿ ಬೆಳೆಸುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿರುತ್ತದೆ. ಪಕ್ಷದ ಶಕ್ತಿ ಹೆಚ್ಚಿಸುವ ಕೆಲಸ ಕಾರ್ಯಕರ್ತರಿಂದ ಮಾತ್ರ ಸಾದ್ಯ ಎಂದು ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಶನಿವಾರ ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಮುಂಡಗೋಡ ತಾಲೂಕು ಯಾವತ್ತೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಇಲ್ಲಿಯ ಜನತೆ ಕಾಂಗ್ರೆಸ್ ಪಕ್ಷವನ್ನು ಯಾವತ್ತೂ ಕೈಬಿಟ್ಟಿಲ್ಲ. ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಜನರು ಅನ್ಯಾಯ ಮಾಡಲಿಲ್ಲ. ಬದಲಾಗಿ ಪಕ್ಷದ ಕೆಲ ಮುಖಂಡರು ಮೋಸ ಮಾಡಿದರು.

ಬಿಜೆಪಿ ವಿರುದ್ದ ವಾಗ್ದಾಳಿ

ಬಿಜೆಪಿ ಸರ್ಕಾರದಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ಎಂಬುವುದರ ಬಗ್ಗೆ ಹೇಳಲಿ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ಜನರು ತತ್ತರಿಸಿಹೋಗಿದ್ದಾರೆ. ಉದ್ಯೋಗ ನೀಡದಿದ್ದರೆ ವಿದ್ಯಾವಂತರು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಹಿಂದುತ್ವ ಹಾಗೂ ಮೋದಿ ಹವಾ, ಇದೆ ಬಿಜೆಪಿಯವರ ಬಂಡವಾಳವಾಗಿದೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಅದರ ಬಗ್ಗೆ ಮಾತನಾಡುವ ಬದಲು ಹಿಂದುತ್ವ ಎನ್ನುತ್ತಾರೆ. ನಾವು ಕೂಡ ಹಿಂದುಗಳೆ ನಮಗೂ ನಮ್ಮ ಧರ್ಮದ ಬಗ್ಗೆ ಅಭಿಮಾನವಿದೆ. ಆ ಜಾತಿ ಈ ಧರ್ಮದಲ್ಲಿ ಹುಟ್ಟಬೇಕೆಂದು ಯಾರು ಅರ್ಜಿ ಹಾಕಿ ಹುಟ್ಟುವುದಿಲ್ಲ.

ಜನಸ್ಪಂದನೆ ಇಲ್ಲದ ಅನಂತಕುಮಾರ ಹೆಗಡೆಗೆ ಜಿಲ್ಲೆಯ ಜನ ೬ ಬಾರಿ ಗೆಲ್ಲಿಸಿ ಸಂಸದರನ್ನು ಮಾಡಿ ಹೇಗೆ ಕಳುಹಿಸಿದರೊ ಆ ದೇವರಿಗೆ ಗೊತ್ತು. ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಈ ಬಾರಿ ಉತ್ತಮ ವಾತಾವರಣವಿದ್ದು, ೧೫ ದಿನಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ನೆಮ್ಮದಿಯಿಂದ ಇರಬಹುದು. ಅಂಜಲಿ ನಿಂಬಾಳ್ಕರ ವಿದ್ಯಾವಂತ ಹಾಗೂ ಪ್ರಗತಿಪರ ಮಹಿಳೆಯಾಗಿದ್ದಾರೆ. ಹೊಸ ಮತದಾರರಿಗೆ ಈ ಬಗ್ಗೆ ತಿ‍ಳಿವಳಿಕೆ ನೀಡಿ ಪ್ರಗತಿಪರರಿಗೆ ಮತ ಕೊಡಿಸಬೇಕಿದೆ ಎಂದರು.

ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಬೀಮಣ್ಣ ನಾಯ್ಕ ಮಾತನಾಡಿ, ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅದೇ ರೀತಿ ದೇಶದಲ್ಲಿ ಕೂಡ ಬದಲಾವಣೆ ಗಾಳಿ ಬೀಸಿದೆ. ೧೦ ವರ್ಷಗಳ ಕಾಲ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಡ ಜನತೆ ತತ್ತರಿಸಿ ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಅನ್ನು ಗೆಲ್ಲಿಸುವ ಸುವರ್ಣಾವಕಾಶ ಒದಗಿ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಉತಮ ಆಡಳಿತ ನೀಡುತ್ತಿದೆ. ಕೇಂದ್ರದಲ್ಲಿ ಸರ್ಕಾರ ಬಂದರೆ ಆರ್ಥಿಕ ಶಕ್ತಿ ತುಂಬುವ ಯೋಜನೆಯನ್ನು ಕಾಂಗ್ರೆಸ್ ರೂಪಿಸಿದೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಕಪ್ಪು ಹಣ ತರುವುದು ಸೇರಿದಂತೆ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಯಾವುದೇ ಭರವಸೆಗಳು ಈಡೇರಿಸಲಿಲ್ಲ. ಗ್ಯಾರಂಟಿ ಯೋಜನೆ ಕಾರ್ಯಗತ ಮಾಡಿ ಬಡವರಿಗೆ ಅನುಕೂಲ ಮಾಡಿಕೊಟ್ಟ ಕೀರ್ತಿ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಬಿಜಿಪಿಯವರು ಕೊಡುವುದು ಹೋಗಲಿ ಕೊಟ್ಟಿದ್ದನ್ನು ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅತಿಕ್ರಮಣ ಹೋರಾಗಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಮಹಿಳಾಧ್ಯಕ್ಷೆ ಭಾರತಿ ಮಾಯಣ್ಣವರ, ಸತೀಶ ನಾಯ್ಕ, ನಾಗರಾಜ ನಾರ್ವೇಕರ, ಬಾಪುಗೌಡ, ವೆಂಕಟೇಶ ಹೆಗಡೆ ಹೊಸಬಾಳೆ, ಶಾರದಾ ರಾಥೋಡ ಮುಂತಾದವರು ಉಪಸ್ಥಿತರಿದ್ದರು. ಜ್ಞಾನದೇವ ಗುಡಿಯಾಳ ಸ್ವಾಗತಿಸಿದರು. ಗೋಪಾಲ ಪಾಟೀಲ ನಿರೂಪಿಸಿದರು. ಧರ್ಮರಾಜ ನಡಗೇರಿ ವಂದಿಸಿದರು.