ಮನೆ ಚಾವಣಿ ಕುಸಿದು, ಮಕ್ಕಳಿಬ್ಬರ ಸಾವು

| Published : Jun 01 2024, 12:47 AM IST

ಸಾರಾಂಶ

ಮನೆ ಚಾವಣಿ ಕುಸಿದು, ಅದರಡಿ ಸಿಕ್ಕಿಹಾಕಿಕೊಂಡ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಮನೆ ಚಾವಣಿ ಕುಸಿದು, ಅದರಡಿ ಸಿಕ್ಕಿಹಾಕಿಕೊಂಡ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕಂದಗಲ್ಲ ಗ್ರಾಮದ ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ಮಕ್ಕಳು. ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಅಜ್ಜ ಅಜ್ಜಿ ಹೊರಗೆ ಹೋಗಿದ್ದಾಗ ಈ ಘಟನೆ ಜರುಗಿದೆ.

ಕಳೆದ 40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿತ್ತು. ಹೀಗಾಗಿ ಕುಟುಂಬದವರು ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.

ಹೀಗಾಗಿ ಮಕ್ಕಳು ಚಾವಣಿಯಿಂದ ಮೇಲೆ ಬರಲು ಸಾಧ್ಯವಾಗಿಲ್ಲ. ಚಾವಣಿಯ ಮಣ್ಣಿನಲ್ಲಿಯೇ ಸಿಲುಕಿ, ಉಸಿರುಗಟ್ಟಿ ಅಸುನೀಗಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲೂಕಾಸ್ಪತ್ರೆಗೆ ಸಾಗಿಸಿದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಗೆ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದರು.