ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ರಾಜಕಾಲುವೆಗಳು ಕಸ ಮತ್ತು ಹೂಳಿನಿಂದ ತುಂಬಿ ಹೋಗಿವೆ. ಸಾಲದ್ದಕ್ಕೆ ಮಾರ್ಗದುದ್ದಕ್ಕೂ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಮಳೆಗಾಲಕ್ಕೆ ಮುಂಚೆಯೇ ರಾಜಕಾಲುವೆಗಳಲ್ಲಿರುವ ಕಸವನ್ನು ತೆರವುಗೊಳಿಸಿ, ಹೂಳು ತೆಗೆಸಬೇಕಿದ್ದ ಮಹಾನಗರ ಪಾಲಿಕೆ ಜವಾಬ್ದಾರಿ ಮರೆತು ಕೈ ಕಟ್ಟಿ ಕುಳಿತಿದೆ.ವರ್ಷದಿಂದ ಕಟ್ಟಿಕೊಂಡಿರುವ ಕಸ ಮತ್ತು ಹೂಳಿನಿಂದಾಗಿ ರಾಜಕಾಲುವೆಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದ ಸ್ಥಿತಿ ಇದೆ. ಜೋರಾಗಿ ಮಳೆ ಬಂದರೆ ಕಾಲುವೆ ನೀರು ಮುಂದಕ್ಕೆ ಸಾಗುವ ಬದಲು, ಅಲ್ಲಿಯೇ ಕಟ್ಟಿಕೊಂಡು ರಸ್ತೆ ಮೇಲೆ ಹರಿಯುತ್ತದೆ. ಇತ್ತೀಚೆಗೆ ಸುರಿದ ಮಳೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗುವ ಅಪಾಯ ಎದುರಾಗಿದೆ.
ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕವರ್, ಬಾಟಲಿಗಳು, ಮೂಟೆಯಲ್ಲಿ ತುಂಬಿದ ತ್ಯಾಜ್ಯವನ್ನು ಚರಂಡಿ ಮತ್ತು ರಾಜಕಾಲುವೆಗಳಿಗೆ ಸ್ಥಳೀಯರೇ ಗೊತ್ತಾಗದಂತೆ ತಂದು ಎಸೆದು ಹೋಗುತ್ತಾರೆ. ಇದರಿಂದಾಗಿ ಇವುಗಳಲ್ಲಿ ಹೂಳು ಸಂಗ್ರಹಗೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.ಮಹಾನಗರ ಪಾಲಿಕೆಯು ಮಳೆ ಅನಾಹುತ ತಪ್ಪಿಸಲು ಸರ್ವ ಸನ್ನದ್ಧವಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಮಳೆ ನೀರು ಹರಿಯುವ ಪ್ರಮುಖ ರಾಜಕಾಲುವೆಗಳನ್ನೇ ಸ್ವಚ್ಛ ಮಾಡಿಲ್ಲ. ನಗರದೊಳಗಿನ ರಾಜಕಾಲುವೆಗಳಲ್ಲಿ ಕಳೆ ಬೆಳೆದು, ಹೂಳು, ತ್ಯಾಜ್ಯ ತುಂಬಿಕೊಂಡಿದೆ. ದುರ್ನಾತ ಬೀರುತ್ತಿದೆ. ಸೊಳ್ಳೆ ಕಾಟ ಜೋರಾಗಿದೆ.
ರಾಜಕಾಲುವೆ, ಮೋರಿಗಳ ಸುತ್ತ ವಾಸಿಸುತ್ತಿರುವವರು ನಿತ್ಯ ನರಕ ಅನುಭವಿಸುವಂತಾಗಿದೆ. ಬಹುತೇಕ ಬಡಾವಣೆಗಳ ಕಾಲುವೆಗಳಲ್ಲಿ ಈ ಸಮಸ್ಯೆ ಇದೆ. ಈಗಾಗಲೇ ಒಂದು ಸುತ್ತು ಮಳೆ ಬಂದು ಹೋಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಇಷ್ಟರಲ್ಲಿ ಮಹಾನಗರ ಪಾಲಿಕೆ ಸಿದ್ಧವಾಗಬೇಕಿತ್ತು. ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ಪಾಲಿಕೆಗೆ ನಮ್ಮ ಗೋಳು ಕೇಳಿದಂತಿಲ್ಲ. ಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನಹರಿಸಿಲ್ಲ. ಪ್ರತಿ ವರ್ಷ ಇದೇ ಗೋಳು’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ರಾಜಕಾಲುವೆಗಳಲ್ಲಿ ಹೂಳು, ತ್ಯಾಜ್ಯ ತುಂಬಿಕೊಂಡಿವೆ. ಗಿಡಗಳು ಬೆಳೆದು ಮಳೆಯ ನೀರು ಸರಾಗವಾಗಿ ಹರಿದುಹೋಗಲು ಜಾಗವೂ ಇಲ್ಲದಂತೆ ಮುಚ್ಚಿಹೋಗಿವೆ. ಸುತ್ತಲಿನ ನಿವಾಸಿಗಳು, ವಾಣಿಜ್ಯ ಮಳಿಗೆ, ಅಂಗಡಿಯವರು ತ್ಯಾಜ್ಯ, ಮದ್ಯದ ಪೌಚ್–ಬಾಟಲಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಎಸೆಯುತ್ತಿದ್ದಾರೆ. ಇನ್ನೊಂದೆಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಹಾಕುತ್ತಿದ್ದಾರೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ.
ಮಳೆ ನೀರಷ್ಟೇ ಹರಿಯಬೇಕಿದ್ದ ರಾಜಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರು ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ಕೊಳಚೆ ಕಾಲುವೆಗಳಾಗಿವೆ.ರಾಜಕಾಲುವೆ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಸಮಸ್ಯೆಗಳು ಎದುರಾದಾಗ ಪಾಲಿಕೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಶರಾವತಿ ನಗರದಿಂದ ಹಾದುಹೋಗುವ ರಾಜಕಾಲುವೆ ಹಾಳಾಗಿದೆ. ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಬಾಪೂಜಿ ನಗರದ, ಹೊಸನಗರ ಮನೆ ಬಡಾವಣೆಯಂತಹ ತಗ್ಗು ಪ್ರದೇಶದ ಮನೆಗಳು ಸಣ್ಣ ಮಳೆಗೂ ಜಲಾವೃತವಾಗುತ್ತವೆ. ಈ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಶಾಶ್ವತ ಪರಿಹಾರ ಕಾಣದೆ ಜನರು ಹೈರಾಣಾಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಗ್ಗು ಪ್ರದೇಶದ ಜನರು ಪ್ರಾಣ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.
ಸಾಂಕ್ರಾಮಿಕ ರೋಗ ಹರಡುವ ಭೀತಿನಗರದ ಚರಂಡಿಗಳು ಮತ್ತು ರಾಜಕಾಲುವೆಗಳು ಕಸ ಎಸೆಯುವ ತಾಣಗಳಾಗಿವೆ. ಮನೆಗಳು ಹಾಗೂ ಕೆಲ ಅಂಗಡಿಗಳ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ತಂದು ಎಸೆಯುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ, ಸಾಂಕ್ರಾಮಿಕ ರೋಗಗಳ ಆತಂಕದಲ್ಲಿ ಜನರು ಜೀವನ ನಡೆಸುವಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದು, ರಾಜಕಾಲುವೆಯು ದುರ್ನಾತ ಬೀರುತ್ತಿದ್ದು, ರಸ್ತೆಯಲ್ಲಿ ಹೋಗುವಾಗ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ರಾಜಕಾಲುವೆ ಅಕ್ಕಪಕ್ಕ ವಾಸಿಸುವವರಲ್ಲಿ ಜ್ವರ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ಪಾಲಿಕೆ ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.