ಹಾಳು ಕೊಂಪೆಯಾದ ಹೊಳೆಆಲೂರ ನವಗ್ರಾಮ !

| Published : Mar 05 2025, 12:33 AM IST

ಸಾರಾಂಶ

ಮಲಪ್ರಭ ಪ್ರವಾಹದಿಂದ ತೊಂದರೆಗೊಳಗಾಗುವ ಜನರಿಗಾಗಿ ಅಂದಿನ ಸರ್ಕಾರ ಆಸರೆ ಯೋಜನೆಯನ್ನು ಪ್ರಾರಂಭಿಸಿ, ಅದಕ್ಕಾಗಿ ಸಾರ್ವನಿಕರಿಂದ ದೇಣಿಗೆ ಸಂಗ್ರಹಿಸಿ ನಿರಾಶ್ರಿತರಿಗಾಗಿ ಮನೆಗಳನ್ನು ನಿರ್ಮಿಸಿತ್ತು. ಹಾಗೆ ನಿರ್ಮಿಸಿದ ಮನೆಗಳಲ್ಲಿ ತಾಲೂಕಿನ ಹೊಳೆಆಲೂರ ಗ್ರಾಮಕ್ಕೆ ನಿರ್ಮಾಣ ಮಾಡಿರುವ ಜಗನ್ನಾಥ ನಗರ ನವ ಗ್ರಾಮವೂ ಜನವಸತಿ ಇಲ್ಲದೇ ಹಾಳುಬಿದ್ದ ಕೊಂಪೆಯಂತಾಗಿದೆ.

ಪಿ.ಎಸ್. ಪಾಟೀಲಕನ್ನಡಪ್ರಭ ವಾರ್ತೆ ರೋಣಮಲಪ್ರಭ ಪ್ರವಾಹದಿಂದ ತೊಂದರೆಗೊಳಗಾಗುವ ಜನರಿಗಾಗಿ ಅಂದಿನ ಸರ್ಕಾರ ಆಸರೆ ಯೋಜನೆಯನ್ನು ಪ್ರಾರಂಭಿಸಿ, ಅದಕ್ಕಾಗಿ ಸಾರ್ವನಿಕರಿಂದ ದೇಣಿಗೆ ಸಂಗ್ರಹಿಸಿ ನಿರಾಶ್ರಿತರಿಗಾಗಿ ಮನೆಗಳನ್ನು ನಿರ್ಮಿಸಿತ್ತು. ಹಾಗೆ ನಿರ್ಮಿಸಿದ ಮನೆಗಳಲ್ಲಿ ತಾಲೂಕಿನ ಹೊಳೆಆಲೂರ ಗ್ರಾಮಕ್ಕೆ ನಿರ್ಮಾಣ ಮಾಡಿರುವ ಜಗನ್ನಾಥ ನಗರ ನವ ಗ್ರಾಮವೂ ಜನವಸತಿ ಇಲ್ಲದೇ ಹಾಳುಬಿದ್ದ ಕೊಂಪೆಯಂತಾಗಿದೆ.

ಹೊಳೆಆಲೂರ ಮಲಪ್ರಭ ನದಿ ಪಕ್ಕದಲ್ಲಿಯೇ ಇದ್ದು, ನದಿ ಉಕ್ಕಿದಾಗ 1ನೇ ವಾರ್ಡ್‌, ಯಚ್ಚರೇಶ್ವರ ದೇವಸ್ಥಾನದಿಂದ ಸಾಸ್ವಿಹಳ್ಳಿಯವರ ಮನೆವರೆಗೆ. 5, 6, 7 ಮತ್ತು 8 ನೇ ವಾರ್ಡ್‌, ಸೇವಾಲಾಲ ನಗರ, ಮೇಘರಾಜ ನಗರ, ರೈಲು ನಿಲ್ದಾಣ ಏರಿಯಾಗಳು, ಗಾಂಧಿ ನಗರ, ಕೊಂಗವಾಡ ಓಣಿಗಳು ಜಲಾವೃತವಾಗುತ್ತಿದ್ದವು. 2007 ಮತ್ತು 2009ರಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ತುಂಬಿ ಹರಿದ ಮಲಪ್ರಭೆ‌ ನರ್ತನಕ್ಕೆ ನಲುಗಿದ ಈ ಭಾಗ ಅಕ್ಷರಶಃ ನಲುಗಿ, ಜೀವನ ಅಸ್ತವ್ಯಸ್ತಗೊಂಡಿತ್ತು. ಮನೆಗಳಿಗೆ ನುಗ್ಗಿದ ನೀರು ಮನೆಯಲ್ಲಿನ ದವಸ ಧಾನ್ಯ, ಕೃಷಿ ಸಾಮಗ್ರಿ, ಮಕ್ಕಳ‌ ಪುಸ್ತಕ ಬ್ಯಾಗ್‌, ಬಟ್ಟೆ ಬರೆಗಳು ನೀರು ಪಾಲಾಗಿದ್ದವು. ಆ ಸಂದರ್ಭದಲ್ಲಿ ಜಾನುವಾರುಗಳು ಪಾಡು ಹೇಳತೀರದಾಗಿತ್ತು. ಪರಿಸ್ಥಿತಿ ಅರಿತ ಸರ್ಕಾರ ಹೊಳೆಆಲೂರ ಗ್ರಾಮವನ್ನು ಭಾಗಶಃ ಬೇರಡೆ ಸ್ಥಳಾಂತರಿಸಿತ್ತು. ಜಗನ್ನಾಥ ನಗರ ನಿರ್ಮಾಣ: ರೋಣದ ರಸ್ತೆಯಲ್ಲಿ (ಮೂಲ ಹೊಳೆಆಲೂರ ಗ್ರಾಮದಿಂದ) 4 ಕಿ.ಮೀ. ದೂರದಲ್ಲಿ ಸರ್ಕಾರ ಎಕರೆಗೆ ₹.2.5 ಲಕ್ಷದಂತೆ ಒಟ್ಟು 40 ಎಕರೆ ಪ್ರದೇಶವನ್ನು ಭೂಸ್ವಾಧೀನ ಕಾಯ್ದೆಯನ್ವಯ ವಶಪಡಿಸಿಕೊಂಡಿತು. ಆರ್.ಎಸ್.ಎಸ್ ಅಂಗ ಸಂಸ್ಥೆಯಾದ ಸೇವಾ ಭಾರತಿ ಬೆಂಗಳೂರು ₹ 7.5 ಕೋಟಿ ಖರ್ಚು ಮಾಡಿ ಒಟ್ಟು 473 ಮನೆಗಳನ್ನು ನಿರ್ಮಿಸಿ, ಸ್ವಾತಂತ್ರ್ಯ ಯೋಧ, ಜನಸಂಘದ ಹಿರಿಯ ನೇತಾರ ಜಗನ್ನಾಥರಾವ್ ಜೋಶಿ ಇವರ ಸ್ಮರಣಾರ್ಥ ಈ ನವಗ್ರಾಮಕ್ಕೆ ಜಗನ್ನಾಥ ನಗರ ಎಂದು ನಾಮಕರಣ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಿದೆ.2011ರಲ್ಲಿ ಉದ್ಘಾಟನೆ: ಜಗನ್ನಾಥ ನಗರ ನವಗ್ರಾಮವನ್ನು 2011ರಲ್ಲಿ‌ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಮನೆಗಳ ಕೀಲಿ ವಿತರಿಸುವ ಮೂಲಕ ಉದ್ಘಾಟಿಸಿದರು. ನರಗುಂದ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಇದಾಗಿದ್ದು, ಅಂದು ಸಿ.ಸಿ. ಪಾಟೀಲ ಶಾಸಕರಾಗಿದ್ದರು. ಸದ್ಯ ಕೂಡಾ ಇವರೇ ಶಾಸಕರಾಗಿದ್ದಾರೆ. ಮುಳ್ಳು ಕಂಟಿಗಳು: ಸಂತೆ ಮಾರುಕಟ್ಟೆ, ಉದ್ಯಾನವನ, ಆಟದ ಮೈದಾನ, ಧಾರ್ಮಿಕ ಆಚರಣೆಗೆ ಸ್ಥಳ, ಸಮುದಾಯ ಭವನ, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ರಂಗ ಮಂದಿರ, ಬ್ಯಾಂಕ್, ಸಹಕಾರಿ ಸಂಸ್ಥೆ, ಬಸ್ ಶೆಲ್ಟರ್, ಉಗ್ರಾಣ, ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಸೌಲಭ್ಯ ಒದಗಿಸುವಲ್ಲಿ ಇಲ್ಲಿ ಸಾಕಷ್ಟು ಸ್ಥಳ ಕಾಯ್ದಿರಿಸಿದೆ. ಆದರೆ ಈಗ ಆ ಎಲ್ಲಾ ಜಾಗೆಯಲ್ಲಿ ಮುಳ್ಳುಕಂಟಿಗಳು ಬೆ‍ಳೆದು ಅವೆಲ್ಲಾ ಹೆಮ್ಮರವಾಗಿದ್ದು ಅಲ್ಲಿ ನಡೆದಾಡಲು ಕೂಡಾ ಸಾಧ್ಯವಾಗದಂತಾಗಿದೆ. ಪಕ್ಕದ ಊರಿಗೆ ಶಾಲಾ ಮಕ್ಕಳು:ಇಲ್ಲಿ ಶೇ. 40ರಷ್ಟು ವಾಸವಿರುವ ಕುಟುಂಬದ ಮಕ್ಕಳಿಗೆ ಶಾಲೆ, ಅಂಗನವಾಡಿ ಇಲ್ಲ. ಹಾಗಾಗಿ ಪಕ್ಕದ ನವಗ್ರಾಮ ಅಮರಗೋಳ, ಕುರವಿನಕೊಪ್ಪದಲ್ಲಿನ ಶಾಲೆಗೆ ಜಗನ್ನಾಥ ನಗರದ ಮಕ್ಕಳು ಹೋಗುತ್ತಿದ್ದಾರೆ. ನಮಗೆ ಊಟ, ನೀರಿಲ್ಲ‌ ಅಂದರೂ ಬದುಕುತ್ತೇವೆ. ಆದರೆ ನಮ್ಮ ಮಕ್ಕಳು ಕಲಿಯಾಕ ಶಾಲೆ, ಅಂಗನವಾಡಿ ಇಲ್ಲಂದ್ರ ಹೆಂಗ್ರಿ ಎನ್ನುತ್ತಾರೆ ಇಲ್ಲಿನ‌ ನಿವಾಸಿ ಜಾನಕಿ ಲಮಾಣಿ.ಜನವಸತಿ ವಿರಳವಾದ ಪ್ರದೇಶದಲ್ಲಿ ಜಾಲಿಕಂಟಿಗಳು ಹೆಮ್ಮರವಾಗಿ ಬೆಳೆದಿವೆ. ಅನಾಥ ಮನೆಗಳು ಪಡ್ಡೆಗಳ ಅನೈತಿಕ ಚಟುವಟಿಕೆಗಳಿಗೆ ನೆಚ್ಚಿನ ತಾಣವಾಗಿವೆ. ಇಲ್ಲಿನ ಶೇ.50ರಷ್ಟು ಮನೆಗಳ ಕದ, ಕಿಟಕಿ, ನೆಲುಹಾಸು ಕಲ್ಲು, ಶೌಚಾಲಯ ಸೀಟ್, ರಿಂಗ್‌ಗಳು ನಾಪತ್ತೆಯಾಗಿವೆ. ಮನೆಗಳನ್ನು ನಿರ್ಮಿಸಿಕೊಟ್ಟ ಸೇವಾ ಭಾರತಿ ಸಂಸ್ಥೆಯ ಶ್ರಮ, ಉದ್ದೇಶ ಹೊಳೆ‌ಯಲ್ಲಿ ಎಳ್ಳು ನೀರು ಬಿಟ್ಟಂತಾಗಿದೆ. ಬಾರದ ಹಕ್ಕುಪತ್ರ:ಬಹುತೇಕ ಸಂತ್ರಸ್ತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಆದರೆ ಶೇ. 65ರಷ್ಟು ಮನೆಗಳು ಗ್ರಾಪಂನಲ್ಲಿ ನೊಂದಣಿಯಾಗಿಲ್ಲ. ನವಗ್ರಾಮದ ಮನೆಗಳನ್ನು ನೊಂದಣಿ ಮಾಡಿಸಿಕೊಂಡರೆ ಅವರು ಅಲ್ಲಿ (ನವಗ್ರಾಮಕ್ಕೆ) ಹೋಗಿ ಇರಬೇಕಾಗುತ್ತದೆ ಎಂಬ ಆತಂಕದಿಂದ ಬಹುತೇಕರು ಮನೆಗಳ ನೊಂದಣಿಗೆ ಮುಂದಾಗಿಲ್ಲ. ನೆರೆಯಿಂದ ಮನೆ ಕಳೆದುಕೊಂಡವರು, ಬಡವರು ಮಾತ್ರ ನವಗ್ರಾಮದಲ್ಲಿ ವಾಸವಾಗಿದ್ದಾರೆ. ಶೇ. 60ರಷ್ಟು ಫಲಾನುಭವಿಗಳು ಮೂಲ ಗ್ರಾಮದಲ್ಲಿಯೇ ಎಲ್ಲಾ ಸೌಕರ್ಯಗಳೊಂದಿಗೆ ವಾಸವಾಗಿದ್ದಾರೆ. ಹೀಗಾಗಿ ಸೌಕರ್ಯ ಇಲ್ಲದ ನವಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನೆರೆ ಬಂದಾಗ ಮಾತ್ರ ಒಂದಿಷ್ಟು ದಿನ ವಾಸವಿದ್ದು, ನೆರೆ ಇಳಿದಾಗ ಮತ್ತೆ ಮೂಲ ಗ್ರಾಮದ ಮನೆಗೆ ಹೋಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ನವಗ್ರಾಮದಲ್ಲಿ ವಾಸಿಸುವ ಮನೆಗಳ ಸುತ್ತಮುತ್ತಲೂ ಬೆಳೆಯುವ ಮುಳ್ಳು ಕಂಟಿಗಳನ್ನು ಅವರೇ ಸ್ವಚ್ಛ ಮಾಡಿಕೊಳ್ಳಬೇಕು. ವಾಸ ಇರದ ಮನೆ ಸುತ್ತಲಿನ ಜಾಗೆಯಲ್ಲಿ, ರಸ್ತೆಯೂದ್ದಕ್ಕೂ ಬೆಳೆದಿರುವ ಜಾಲಿಕಂಟಿ ತೆರವು ಕಾರ್ಯ ಕೈಗೊಳ್ಳಲಾಗುವುದು. ಜನವಸತಿ ಇಲ್ಲದ ಮನೆಗಳ ಕದ, ಕಿಟಕಿ, ನೆಲು ಹಾಸು ಕಳುವಾಗಿವೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಹೊಳೆಆಲೂರ ಪಿಡಿಒ ಬಿ.ಎಸ್. ಗಿರಿತಿಮ್ಮಣ್ಣವರ ಹೇಳಿದರು.

ಮಳೆಯಾದ್ರೆ ರಸ್ತೆದಾಗ ಅಡ್ಡಾಡಾಕ್‌ ಆಗಲ್ರಿ, ಮಳೆ‌ನೀರು ಮನೆಯಾಗ ಬರತಾವ್ರಿ. ಗಟಾರ ಇಲ್ಲದಕ್ಕ ಗಲೀಜು ನೀರು ಮುಂದೆ ಹೋಗದೇ ನಿಂತಲ್ಲಿ ನಿಂತು ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗೈತ್ರಿ. ಇಲ್ಲಿ ನಮ್ಮ ಮಕ್ಕಳಿಗೆ ಶಾಲೆ, ಅಂಗನವಾಡಿ ಇಲ್ಲರಿ, ಆಸ್ಪತ್ರೆ ಇಲ್ಲರಿ. ನಾವು ಬಡವರು ಅಂತಾನೇ ನಮ್ಮನ್ ನಿರ್ಲಕ್ಷ್ಯ ಮಾಡ್ಯಾರಿ. ಎಲೆಕ್ಷನ್ ಇದ್ದಾಗ ಬರತಾರ್ರಿ, ನಿಮಗೆ ಎಲ್ಲಾ ಸೌಲಭ್ಯ ಕೊಡ್ತೆವಿ ಅಂತಾರ. ಆ ಮೇಲೆ‌ ಯಾರೂ ಇತ್ಲಾಗ ಬಂದು ನೋಡಲ್ರಿ ಹೊಳೆಆಲೂರ ನವಗ್ರಾಮ ವಾಸಿಗಳಾದ ಜಾನಕಿಬಾಯಿ ಲಮಾಣಿ, ಸಾವಂತ್ರೆವ್ವ, ಅಬ್ದುಲಸಾಬ ಮುಲ್ಲಾ, ಮುತ್ತಪ್ಪ‌ ಲಮಾಣಿ ಹೇಳಿದರು.