ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಕೋಟ್ಯಂತರ ಸ್ವಯಂಸೇವಕರೇ ಆರ್‌ಎಸ್‌ಎಸ್ ಆಸ್ತಿ. ಸಂಘ ಎಂದಿಗೂ ವ್ಯಕ್ತಿಯ ಮಹತ್ವವನ್ನು ಮರೆಯುವುದಿಲ್ಲ. ಸಮಾಜದಲ್ಲಿ ತನ್ನ ಮೊದಲ ಘಟಕವೇ ವ್ಯಕ್ತಿ ಎಂಬುದನ್ನು ಆರ್‌ಎಸ್‌ಎಸ್ ಅರಿತಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಕೋಟ್ಯಂತರ ಸ್ವಯಂಸೇವಕರೇ ಆರ್‌ಎಸ್‌ಎಸ್ ಆಸ್ತಿ. ಸಂಘ ಎಂದಿಗೂ ವ್ಯಕ್ತಿಯ ಮಹತ್ವವನ್ನು ಮರೆಯುವುದಿಲ್ಲ. ಸಮಾಜದಲ್ಲಿ ತನ್ನ ಮೊದಲ ಘಟಕವೇ ವ್ಯಕ್ತಿ ಎಂಬುದನ್ನು ಆರ್‌ಎಸ್‌ಎಸ್ ಅರಿತಿದೆ. ಇಂಥವರ ಪೈಕಿ ಸಂಘದ ಜೇಷ್ಠ ಪ್ರಚಾರಕರಾಗಿದ್ದ ಮೈ.ಚ.ಜಯದೇವ ಎಲ್ಲರಿಗೂ ಮೇಲ್ಪಂಕ್ತಿಯಾಗಿದ್ದಾರೆ ಎಂದು ಆರ್‌ಎಸ್‌ಎಸ್‌ನ ಜೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಗುರುವಾರ ಸಂಜೆ ರಾಷ್ಟೋತ್ಥಾನದಿಂದ ಏರ್ಪಡಿಸಿದ್ದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮೈ.ಚ.ಜಯದೇವ ಅವರ ಜೀವನ ಚರಿತ್ರೆ ''''''''ಅವಿಶ್ರಾಂತ ಧ್ಯೇಯಜೀವಿ'''''''' ಕುರಿತು ಮಾತನಾಡಿದ ಅವರು, ವ್ಯಕ್ತಿ ಎಂದಿಗೂ ತಾನು ಒಬ್ಬಂಟಿ ಎಂದು ಭಾವಿಸುವುದಕ್ಕೆ ಸಂಘ ಅವಕಾಶ ನೀಡುವುದಿಲ್ಲ. ಆತನನ್ನು ತನ್ನೊಂದಿಗೆ ಸೇರಿಸಿಕೊಂಡು ಸಮಾಜ ಕಾರ್ಯದಲ್ಲಿ ಸಂಘ ಸದಾ ನಿರತವಾಗಿರುತ್ತದೆ ಎಂದು ತಿಳಿಸಿದರು.
ಸಂಘದಲ್ಲಿ ಎಳ್ಳಷ್ಟೂ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಇಲ್ಲಿ ಆತ್ಮಸ್ತುತಿ ಸಲ್ಲದು. ಪರ ವ್ಯಕ್ತಿಯ ನಿಂದನೆಯೂ ಇರದು. ವ್ಯಕ್ತಿಗತ ಅಹಂಕಾರಕ್ಕೆ, ಸಂಘ ಇರುವುದೇ ನನ್ನಿಂದ ಎಂಬ ಮನೋಭಾವಕ್ಕೂ ಅವಕಾಶವಿಲ್ಲ. ಆದರೆ ನಾನು ಇರುವುದೇ ಸಂಘಕ್ಕಾಗಿ ಎಂಬ ಭಾವನೆ ಎಲ್ಲ ಸ್ವಯಂ ಸೇವಕರಲ್ಲೂ ಇರುತ್ತದೆ ಎಂದರು.ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಸ್ವತಃ ಸ್ವಯಂ ಸೇವಕರೇ ಸಂಘಕ್ಕೆ ಅಷ್ಟೊಂದು ಪ್ರಚಾರ ನೀಡಲಿಲ್ಲ. ಆದರೆ ಗೃಹ ಸಚಿವರು ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಗೃಹ ಸಚಿವರು ಒಂದು ರೀತಿಯಲ್ಲಿ ಆರ್‌ಎಸ್‌ಎಸ್‌ನ ಪಿಆರ್‌ಒ ರೀತಿ ವರ್ತಿಸುತ್ತಿದ್ದಾರೆ ಎಂದರು.
ಆರ್‌ಎಸ್‌ಎಸ್‌ನವರ ಮನೆ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎನ್ನುವ ಗೃಹ ಸಚಿವರಿಗೆ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದರು ಹಾಗೂ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂಬ ಮಾಹಿತಿಯೇ ಇಲ್ಲ ಎಂದು ವ್ಯಂಗ್ಯವಾಡಿದರು.ಮೈ.ಚ.ಜಯದೇವ ಅವರ ಜೀವನ ಚರಿತ್ರೆ ಅವಿಶ್ರಾಂತ ಧ್ಯೇಯಜೀವಿ, ಎಸ್.ಆರ್. ರಾಮಸ್ವಾಮಿ ರಚನೆಯ ''''''''ಇತಿಹಾಸ ಸೆರಗು'''''''' ಹಾಗೂ ಪತ್ರಕರ್ತ ದು.ಗು.ಲಕ್ಷ್ಮಣ ಅವರ ''''''''ಕ್ರಾಂತಿಕಾರಿ ಕಿಡಿಗಳು'''''''' ಕೃತಿಯನ್ನು ಬಿಡುಗಡೆ ಮಾಡಲಾಯಿತು.
ರಾಷೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಮಾತನಾಡಿ, ರಾಷ್ಟೋತ್ಥಾನಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಮೈ.ಚ.ಜಯದೇವ ಅವರು. ರಾಷ್ಟ್ರೀಯ ಸಾಹಿತ್ಯವನ್ನು ಸಮಾಜಕ್ಕೆ ತಲುಪಿಸುವುದು ರಾಷ್ಟೋತ್ಥಾನದ ಮುಖ್ಯ ಉದ್ದೇಶ. ಇಲ್ಲಿಯವರೆಗೆ 193 ಕೃತಿಗಳನ್ನು ಪ್ರಕಟಿಸಲಾಗಿದೆ. ಸಾಹಿತ್ಯ, ಶಿಕ್ಷಣ, ಆರೋಗ್ಯ ಹಾಗೂ ಸೇವೆ ಈ ನಾಲ್ಕು ಆಯಾಮಗಳಲ್ಲಿ ರಾಷ್ಟೋತ್ಥಾನ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ಆರ್‌ಎಸ್‌ಎಸ್‌ನ ಪ್ರಮುಖರಾದ ಸು.ರಾಮಣ್ಣ ಮಾತನಾಡಿ, ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದಲೋ, ಅಸೂಯೆಯಿಂದಲೂ ಮಾತನಾಡುವವರು ಒಮ್ಮೆ ಸಂಘದೊಳಕ್ಕೆ ಬಂದು ತೆರೆದ ಮನಸ್ಸಿನಿಂದ ಗಮನಿಸಬೇಕು. ಆಗ ಸಂಘದ ನಿಜವಾದ ಶಕ್ತಿ, ವ್ಯಕ್ತಿ ಹಾಗೂ ದೇಶ ನಿರ್ಮಾಣ ಕಾರ್ಯದ ಬಗ್ಗೆ ತಿಳಿಯುತ್ತದೆ. ಸಂಘಕ್ಕೆ 100 ವರ್ಷ ತುಂಬಿದರೂ ಅದಕ್ಕೆ ಏಕೆ ಮುಪ್ಪು ಬಂದಿಲ್ಲ? ಸಂಪೂರ್ಣ ವಿಶ್ವವನ್ನೇ ಸಂಘ ಹೇಗೆ ಒಳಗೊಂಡು ಸಾಗುತ್ತಿದೆ ಎಂಬದು ಅರಿವಿಗೆ ಬರುತ್ತದೆ ಎಂದು ಹೇಳಿದರು.
ಬೆಂಗಳೂರು ನೃಪತುಂಗ ವಿವಿಯ ಸಂಸ್ಥಾಪಕ ಕುಲಪತಿ ಶ್ರೀನಿವಾಸ ಬಳ್ಳಿ, ಪತ್ರಕರ್ತ ದು.ಗು.ಲಕ್ಷ್ಮಣ, ರಾಷ್ಟೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ, ಶಿವಮೊಗ್ಗ ರಾಷ್ಟೋತ್ಥಾನ ಬಳಗ ಅಧ್ಯಕ್ಷ ಡಾ. ಸುಧೀಂದ್ರ ಉಪಸ್ಥಿತರಿದ್ದರು.ಕೆಲವರ ಬಲಿದಾನವನ್ನು ತೆರೆಮರೆಗೆ ಸರಿಸಲಾಗಿದೆ: ದು.ಗು.ಲಕ್ಷ್ಮಣ
ಬ್ರಿಟೀಷರು ಹಾಗೂ ಭಾರತೀಯ ಎಡಪಂಥೀಯ ಇತಿಹಾಸಕಾರರು ಭಾರತ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನೇ ಮರೆಮಾಚಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಅನೇಕರನ್ನು ತೆರೆಮರೆಗೆ ಸರಿಸಲಾಗಿದೆ ಎಂದು ಪತ್ರಕರ್ತ ದು.ಗು.ಲಕ್ಷ್ಮಣ ಹೇಳಿದರು. ಇಂದಿಗೂ ನಾವು ಮಕ್ಕಳಿಗೆ ಹೋರಾಟಗಾರರ ಪರಿಚಯವನ್ನು ಸರಿಯಾಗಿ ಮಾಡಿಕೊಟ್ಟಿಲ್ಲ. ಜವಹರಲಾಲ್ ನೆಹರು, ಮಹಾತ್ಮ ಗಾಂಧಿ ಮುಂತಾದ ಕೆಲವರನ್ನಷ್ಟೇ ವೈಭವೀಕರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು, ಗಾಂಧೀಜಿ `ಎಂದಿಗೂ ರಕ್ತ ಸುರಿಸಲಿಲ್ಲ. ನೆಹರು ಜೈಲಿಗೆ ಹೋಗಿ ಬಂದಿದ್ದು. ಅಲ್ಪ ಕಾಲಕ್ಕೆ. ಆದರೆ ಹಲವಾರು ಹೋರಾಟಗಾರರು ಮರಣ ದಂಡನೆ ಶಿಕ್ಷೆಗೆ ಗುರಿಯಾದರು ಎಂದು ಅಭಿಪ್ರಾಯಪಟ್ಟರು.