ನವೀಕೃತಗೊಂಡ ಹಳೇ ನ್ಯಾಯಾಲಯ ಆವರಣದಲ್ಲಿ ಔದ್ಯಮಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಹಾಗೂ ಪ್ರಧಾನ ಕೌಟುಂಬಿಕ ನ್ಯಾಯಾಲಯಗಳನ್ನು ಉದ್ಘಾಟಿಸಲಾಯಿತು.
ಹುಬ್ಬಳ್ಳಿ:
ನವೀಕೃತಗೊಂಡ ಹಳೇ ನ್ಯಾಯಾಲಯ ಆವರಣದಲ್ಲಿ ಔದ್ಯಮಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಹಾಗೂ ಪ್ರಧಾನ ಕೌಟುಂಬಿಕ ನ್ಯಾಯಾಲಯಗಳನ್ನು ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಅವರು ಶನಿವಾರ ಉದ್ಘಾಟಿಸಿದರು.ನಂತರ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸಿದ ವಿವಿಧ ಜಿಲ್ಲೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ತಮಗೆ ನ್ಯಾಯಾಧೀಶರಾಗುವ ಕನಸೂ ಇರಲಿಲ್ಲ. 1984ರಲ್ಲಿ ಐದು ವರ್ಷದ ಎಲ್ಎಲ್ಬಿ ಪದವಿ ಪೂರ್ಣಗೊಳಿಸಿ ಹಾಸನ ಹಾಗೂ ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದೆ. ಬಳಿಕ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿ ನ್ಯಾಯಾಂಗ ಸೇವೆ ಪ್ರವೇಶಿಸಿದೆ. 25 ವರ್ಷಗಳ ನ್ಯಾಯಾಧೀಶ ವೃತ್ತಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ ಎಂದರು.ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಾಗಿ ವಸತಿ ಸಮುಚ್ಚಯ ನಿರ್ಮಾಣ ಯೋಜನೆ ರೂಪಿಸಿ ಯಶಸ್ವಿಗೊಳಿಸಿದ್ದೇನೆ. ಮೈಸೂರಿನಲ್ಲಿ ₹ 77 ಕೋಟಿ ವೆಚ್ಚದಲ್ಲಿ ಸಿಬ್ಬಂದಿಗಾಗಿ ವಸತಿ ಸಮುಚ್ಚಯ ನಿರ್ಮಿಸಿದ್ದರೂ, ಇಂದಿಗೂ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ. ಉದ್ಘಾಟನೆಯೂ ಆಗದೆ ಉಳಿದಿರುವುದು ಬೇಸರದ ಸಂಗತಿ. ಹಾವೇರಿಯಲ್ಲಿ ಕಾರ್ಯನಿರ್ವಹಿಸುವಾಗ 11 ಎಕರೆ ಪ್ರದೇಶದಲ್ಲಿ 120 ನಿವೇಶನಗಳನ್ನು ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ ಒದಗಿಸಿದ್ದೇನೆ ಎಂದು ವಿವರಿಸಿದರು.
ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗ ನೀಡುವ ಅವಕಾಶ ದೊರೆತಾಗ ಸಾಮಾಜಿಕ ನ್ಯಾಯದಡಿ ನಿಜವಾಗಿಯೂ ಅಗತ್ಯವಿದ್ದವರಿಗೆ ಉದ್ಯೋಗ ಕಲ್ಪಿಸಿದ ತೃಪ್ತಿ ಇದೆ. ನೇಮಕಾತಿ ಸಂದರ್ಭದಲ್ಲಿ ಪ್ರಭಾವಿಗಳಿಂದ ಸಾಕಷ್ಟು ಕರೆಗಳು ಬಂದರೂ, ತಾವು ರೂಪಿಸಿಕೊಂಡಿದ್ದ 20 ನಿಯಮಗಳ ಆಧಾರದಲ್ಲಿಯೇ ಅರ್ಹರಿಗೆ ಉದ್ಯೋಗ ನೀಡಿದ್ದಾಗಿ ತಿಳಿಸಿದರು.ಧಾರವಾಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ವಿ. ಕೋರಿಮಠ, ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದ ವಿವಿಧ ನ್ಯಾಯಾಧೀಶರು, ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ದಾಟನಾಳ ಸೇರಿದಂತೆ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.