ಕನ್ನಡಪ್ರಭ ವಾರ್ತೆ ಐಗಳಿ

ಅಥಣಿ ತಾಲೂಕಿಗೆ ಬೇರೆ ದೇಶ, ರಾಜ್ಯದ ರೈತರು ಬಂದು ಇಲ್ಲಿಯ ಆಧುನಿಕ ಕೃಷಿ ಬಗ್ಗೆ ತಿಳಿದುಕೊಳ್ಳುವ ಹಾಗೆ ರೈತರು ಕೃಷಿಯಲ್ಲಿ ಸಾಧನೆ ಮಾಡಬೇಕು. ಅಂದಾಗ ಮಾತ್ರ ನಾವು ಮಾಡಿದ ನೀರಾವರಿ ಯೋಜನೆಗಳಿಗೆ ಸಾರ್ಥಕತೆ ಬರುತ್ತದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಆಶಯ ವ್ಯಕ್ತಪಡಿಸಿದರು.ಯಲಿಹಡಲಗಿ ಗ್ರಾಮದಲ್ಲಿ ಸುಮಾರು ₹18.59 ಕೋಟಿ ವೆಚ್ಚದಲ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಹಾಗೂ ಆರೋಗ್ಯ ಇಲಾಖೆಯಿಂದ ಮಂಜೂರಾದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ನೂತನ ಕಟ್ಟಡದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಅಥಣಿ ಮತಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಆಗಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದನ್ನು ಮನಗಂಡು ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಯಲಿಹಡಲಗಿ, ತೆಲಸಂಗ, ಸವದಿ, ಸಂಕೋನಟ್ಟಿ ಗ್ರಾಮಗಳಲ್ಲಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳು ಮಂಜೂರು ಮಾಡಲಾಗಿದೆ. ಇನ್ನು ಕೋಹಳ್ಳಿ, ಬಳವಾಡ, ಪಾರ್ಥನಹಳ್ಳಿ, ಝುಂಜರವಾಡ ಗ್ರಾಮಗಳಲ್ಲಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಈ ಎಲ್ಲ ಕೇಂದ್ರಗಳು ಸಂಪೂರ್ಣಗೊಂಡ ಮೇಲೆ ಈ ಭಾಗದ ರೈತರಿಗೆ ಹಗಲಿನಲ್ಲಿಯೇ ಏಳು ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ಯಲಿಹಡಲಗಿ ಗ್ರಾಮದ ಸುತ್ತಲಿನ ಜನರು ದೂರ ಆರೋಗ್ಯ ಕೇಂದ್ರಕ್ಕೆ ಅಲೆಡಾಟ ತಪ್ಪಿಸಲು ಇದೇ ಗ್ರಾಮದಲ್ಲಿ ಸುಮಾರು ₹65 ಲಕ್ಷ ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಅಥಣಿ ಹೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ ಸಂಪಣ್ಣವರ ಮಾತನಾಡಿ, ಯಲಿಹಡಲಗಿ ಗ್ರಾಮದಲ್ಲಿ 50 ಮೆ.ವ್ಯಾಟ್ ವಿದ್ಯುತ್ ಸೋಲಾರ್ ಪಾರ್ಕ್ ನಿರ್ಮಿಸಿ ನೇರವಾಗಿ ರೈತರಿಗೆ ವಿದ್ಯುತ್ ನೀಡುವ ಕಾರ್ಯ ಮಾಡಲಾಗುವುದು. ಅದರಂತೆ ರೈತರು ತಮ್ಮ ಜಮೀನುಗಳಲ್ಲಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದರಲ್ಲಿ ರಾಜ್ಯ ಸರ್ಕಾರ ಶೇ.50 ಮತ್ತು ಕೇಂದ್ರ ಸರ್ಕಾರ ಶೇ.30 ರಷ್ಟು ರೈತರ ವಂತಿಗೆ ಶೇ.20 ಇದ್ದು, ಪ್ರತಿಯೊಬ್ಬ ರೈತರು ತಮ್ಮ ವಂತಿಗೆಯನ್ನು ಪಾವತಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಮುಖಂಡ ಶಿವು ಗುಡ್ಡಾಪೂರ ಮಾತನಾಡಿ, ಅಥಣಿ ಕ್ಷೇತ್ರದಲ್ಲಿ ನೀರಾವರಿ ಆರೋಗ್ಯ, ವಿದ್ಯುತ್, ರಸ್ತೆ ಸೇರಿದಂತೆ ಎಲ್ಲ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ನಡೆಸುತ್ತಿರುವ ಶಾಸಕ ಲಕ್ಷ್ಮಣ ಸವದಿ ಅವರಿಗೆ ನಾವೆಲ್ಲ ಶಕ್ತಿಯಾಗಿ ನಿಲ್ಲೋಣ ಎಂದರು.


ಈ ವೇಳೆ ಬೆಳಗಾವಿಯ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಮಂಜಪ್ಪ ಅಪ್ಪಣ್ಣವರ, ಸಂಜು ಅಮ್ಮಣ್ಣವರ, ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಎಮ್.ಬಿ.ಬಾಲಪ್ಪಣ್ಣವರ, ಪಿಡಿಒ ಬಸವರಾಜ ಹೊನಕಾಂಬಳೆ, ಇಂಜನಿಯರ್ ಮಹಾನಂದಾ ಹಲಕಿ, ಮಾನಸಿಂಗ್ ಬೋರಾಡೆ, ಸಿ. ಎಸ್.ನೇಮಗೌಡ, ಮಹಾದೇವ ನಾಗನೂರ, ಮಾಳೋಜಿರಾವ್ ಇಂಗೋಲೆ, ಘಟಿವಾಳಪ್ಪ ಗುಡ್ಡಾಪೂರ, ಸಿದರಾಯ ನಾಯಿಕ, ಈರಗೌಡ ಪಾಟೀಲ, ನೂರಅಹ್ಮದ್ ಡೊಂಗರಗಾಂವ, ಮನೋಜ ಬೋರಾಡೆ, ಸದಾಶಿವ ಹರಪಾಳೆ, ಶಂಕರ ಪೂಜಾರಿ, ಮಡಿವಾಳಪ್ಪ ಯಳವರ, ಗುರುದತ್ತ ಕುಲಕರ್ಣಿ, ಮಹಾದೇವ ಬಿರಾದಾರ, ವಿಜಯ ದೊಡಮನಿ, ಗುತ್ತಿಗೆದಾರ ಮಹಾದೇವಯ್ಯಾ ಗಚ್ಚಿನಮಠ, ಮುರಗೆಂದ್ರ ಅಳ್ಳಿಮಟ್ಟಿ ಸೇರಿ ಗ್ರಾಮಸ್ಥರು ಪಾಲ್ಗೊಂಡಿದರು