ಸಾರಾಂಶ
54 ವರ್ಷಗಳ ಇತಿಹಾಸ ಹೊಂದಿದ ಶಾಲೆ, ಜೀವ ಭಯದಲ್ಲಿ ವಿದ್ಯಾರ್ಥಿಗಳ ಕಲಿಕೆ
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕರು ವಿದ್ಯಾಭ್ಯಾಸ ಮಾಡಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಎಲ್ಲ ಕೊಠಡಿಗಳು ಶಿಥಿಲಗೊಂಡು ಕುಸಿತದ ಭೀತಿ ಎದುರಿಸುತ್ತಿವೆ.ಈ ಸರ್ಕಾರಿ ಪ್ರೌಢಶಾಲೆಯು 1970-71ನೇ ಸಾಲಿನಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 54 ವರ್ಷಗಳ ಕಾಲದ ಇತಿಹಾಸ ಹೊಂದಿದೆ. ಇಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಜ್ನಾನಾರ್ಜನೆ ಪಡೆದುಕೊಂಡು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೆ ಈಗ ಶಾಲೆಯ ಎಲ್ಲ ಕೊಠಡಿಗಳು ಶಿಥಿಲಗೊಂಡಿವೆ. ಸ್ವಲ್ಪ ಮಳೆ ಬಂದರೆ ಸಾಕು ಕೊಠಡಿಗಳೆಲ್ಲ ಸೋರುವುದರ ಜೊತೆಗೆ ಕಬ್ಬಿಣದ ಚೂರುಗಳು ಉದುರಿ ಬೀಳುತ್ತದೆ, ಸಿಮೆಂಟ್ ಉದುರುತ್ತದೆ. ಕಟ್ಟಡದ ಕೊಠಡಿಗಳು ಬೀಳುವಂತಹ ಸ್ಥಿತಿಯಲ್ಲಿದ್ದು, ಕೂಡಲೇ ಇದಕ್ಕೆ ಹೊಸರೂಪ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ಮನಸ್ಸು ಮಾಡಬೇಕಾಗಿದೆ.
ಈ ಪ್ರೌಢಶಾಲೆ 8ನೇ ತರಗತಿಯಿಂದ 10ನೇ ತರಗತಿಯವರೆಗೂ ಇದ್ದು, ಸುಮಾರು 198 ಮಕ್ಕಳು ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದಾರೆ. ಈ ಮುಂಗಾರು ಮಳೆಯು ಆರಂಭಗೊಂಡ ಹಿನ್ನೆಲೆ ಶಾಲಾ ಕಟ್ಟಡ ಕುಸಿಯಬಹುದು ಎಂಬ ಭೀತಿ ಮಕ್ಕಳಲ್ಲಿ ಆವರಿಸಿದೆ.ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಯ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿಯ ಹಣವನ್ನು ವ್ಯಯಮಾಡಿ ತಂದಿರುವ ಸ್ಮಾರ್ಟ ಕ್ಲಾಸ್ ಮಳೆಯಿಂದಾಗಿ ಹಾಳಾಗಿದೆ. ಜೊತೆಗೆ ಶಾಲಾ ಕೊಠಡಿಗಳಿಗೆ ಸಮರ್ಪಕವಾದ ಅಡುಗೆ ಕೊಠಡಿ, ಆಫೀಸ್ ರೂಂ, ತರಗತಿಯ ಕೊಠಡಿಗಳು ಸೇರಿದಂತೆ ವಿದ್ಯುತ್ ಸೌಲಭ್ಯದ ಕೊರತೆಯು ಕಾಡುತ್ತಿದೆ. ಇನ್ನಾದರೂ ಸರ್ಕಾರ, ಶಿಕ್ಷಣ ಇಲಾಖೆ ಶಿಥಿಲಗೊಂಡ ಶಾಲೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಮಕ್ಕಳ ಕಲಿಕೆಗೆ ಹಾಗೂ ಅವರ ಉಜ್ವಲ ಭವಿಷ್ಯಕ್ಕೆ ಬೆಳಕಾಗಬೇಕಿದೆ. ಸದ್ಯ ಪಕ್ಕದಲ್ಲಿನ ಪಿಯು ಕಾಲೇಜಿನ ಕೊಠಡಿಗಳಿಗೆ ತರಗತಿಗಳನ್ನು ನಡೆಸಲು ಹಾಗೂ ಬಿಸಿಯೂಟಕ್ಕಾಗಿ ರೂಮುಗಳನ್ನು ಸ್ಥಳಾಂತರ ಮಾಡಿ ಅನುಕೂಲ ಮಾಡಿಕೊಡಲಾಗಿದೆ.ಈ ಶಾಲೆಯಲ್ಲಿ ಅವಶ್ಯಕವಾಗಿ ಬೇಕಾಗುವ ಕಂಪ್ಯೂಟರ್ ಕೊಠಡಿ ಇಲ್ಲ, ಕ್ರೀಡಾ ಸಾಮಗ್ರಿಗಾಗಿ ಕೊಠಡಿ ಇಲ್ಲ, ಬಿಸಿಯೂಟದ ಆಹಾರ ದಾಸ್ತಾನು ಕೊಠಡಿ ಇಲ್ಲ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಇಲ್ಲವಾಗಿದೆ. ಎಲ್ಲ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಹೇಳುವ ಸರ್ಕಾರ ಇಂತಹ ದುಸ್ಥಿತಿಯಲ್ಲಿರುವ ಶಾಲೆಯತ್ತ ಗಮನವಹಿಸಬೇಕಾಗಿದೆ.