ಕನ್ನಡಪ್ರಭ ವಾರ್ತೆ ಲೋಕಾಪುರ
ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದ ಬಿಸಿಲ ತಾಪ ಕ್ರಮೇಣ ಏರುತ್ತಿದ್ದು, ಬಿಸಿಲ ಬೇಗೆಯಿಂದ ಹೈರಾಣಾಗಿರುವ ಜನ ದಾಹ ತಣಿಸಿಕೊಳ್ಳಲು ತಂಪು ಪಾನಿಯ ಹಾಗೂ ಹಣ್ಣುಗಳ ಮೊರೆ ಹೋಗಿದ್ದಾರೆ.ಕಲ್ಲಂಗಡಿ, ಕರಬೂಜ, ಎಳನೀರು, ಲಸ್ಸಿ, ತಂಪು ಮತ್ತಿತರರ ತಂಪು ಪಾನೀಯಗಳಿಗೆ ಕ್ರಮೇಣ ಬೇಡಿಕೆ ಹೆಚ್ಚುತ್ತಿದೆ. ಸ್ಥಳೀಯ ಹಣ್ಣಿನ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಮೊದಲು ಬಾಳೆಹಣ್ಣು, ಸೇಬು, ಚಿಕ್ಕು, ಪೇರಲ ಹಾಗೂ ದ್ರಾಕ್ಷಿ ಹಣ್ಣುಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ತಗ್ಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಶಂಕರ ಬಾಳಿಕಾಯಿ.
ಕರಬೂಜ ಕೆ.ಜಿ. ₹೨೦-₹೨೫ ಇದ್ದರೆ ಕಲ್ಲಂಗಡಿ ಕೆ.ಜೆ.ಗೆ ₹೨೫ -₹೩೦ರವರೆಗೆ, ಎಳೆನೀರು ₹೨೫ - ₹೩೦ಕ್ಕೆ ಮಾರಾಟವಾಗುತ್ತಿದೆ, ಏಪ್ರಿಲ್, ಮೇ ತಿಂಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿಗೆ ಎನ್ನುತ್ತಾರೆ ಹಣ್ಣುಗಳ ವರ್ತಕ ರಿಯಾಜ್ ಭಾಗವಾನ.ಕಲ್ಲಂಗಡಿ ಮಾರಾಟ ಜೋರು :
ಮಾರ್ಚ್ ತಿಂಗಳಲ್ಲಿ ಪ್ರಮುಖವಾಗಿ ಕಲ್ಲಂಗಡಿ, ಕರಬೂಜ, ಎಳೆನೀರಿಗೆ ವ್ಯಾಪಕ ಬೇಡಿಕೆ ಇದ್ದು, ಪ್ರತಿನಿತ್ಯ ಒಂದು ಲೋಡ್‌ಗೂ ಅಧಿಕ ಹಣ್ಣು ತರಿಸಿದರೂ ಸಾಲುತ್ತಿಲ್ಲ, ಈ ನಡುವೆ ಮಂಗಳವಾರ ಸಂತೆಯಲ್ಲಿ ಗ್ರಾಮೀಣ ಪ್ರದೇಶದ ಕೃಷಿಕರು, ರೈತರು ತಾವೇ ಬೆಳೆದ ಈ ಹಣ್ಣುಗಳನ್ನು ಟಂ ಟಂ ವಾಹನಗಳಲ್ಲಿ ತಂದು ಮಾರಾಟ ನಡೆಸುತ್ತಿದ್ದಾರೆ. ಆಗ ಬೆಲೆಯೂ ಕನಿಷ್ಠ ಮಟ್ಟಕ್ಕೆ ಇಳಿದಿರುತ್ತದೆ ಎನ್ನುತ್ತಾರೆ ರೈತರು.