ಕಿರಗಂದೂರು ಗ್ರಾಮದಲ್ಲಿ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಸಂಪನ್ನ

| Published : Jul 27 2025, 12:05 AM IST

ಸಾರಾಂಶ

ಕಿರಗಂದೂರು ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಗ್ರಾಮದ ಹಬ್ಬದ ದಿನದಂತೆ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ವನ್ನು ಗ್ರಾಮದ ಹಬ್ಬದ ದಿನದಂತೆ ಆಚರಿಸಲಾಯಿತು.

ಗ್ರಾಮದವರಾಗಿ ಹೊರಜಿಲ್ಲೆಯಲ್ಲಿ ಕೆಲಸ ಮಾಡುತಿದ್ದವರು ಕೂಡ ಈ ಕ್ರೀಡಾಕೂಟದಲ್ಲಿ ಬಂದು ಭಾಗವಹಿಸಿದ್ದು ಕ್ರೀಡೆಗೆ ಇನ್ನಷ್ಟು ಬಲ ನೀಡಿತು. ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಪ್ರಮುಖವಾಗಿ ಮಹಿಳೆಯರ ಹಗ್ಗಜಗ್ಗಾಟ ಹಾಗು ಪುರುಷರ ಹಗ್ಗಜಗ್ಗಾಟ ನೋಡುಗರಿಗೆ ಮಂದಹಾಸ ಮೂಡಿಸಿತು. ಇದರೊಂದಿಗೆ ಮಕ್ಕಳ ಆಟೋಟ. ಪುರುಷ ಹಾಗು ಮಹಿಳೆಯರ ಓಟ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋ ಬಾಲ್, ಹೀಗೆ ಮನಸ್ಸಿಗೆ ಮನರಂಜನೆ ನೀಡುವ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಜಿಟಿ ಜಿಟಿ ಮಳೆಯಲ್ಲೂ ಗ್ರಾಮದ ಬಹುತೇಕ ಜನರು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಕಿರಗಂದೂರು ಗ್ರಾಮದ ಗ್ರಾಮ ಅಭಿವೃದ್ಧಿ ಅಧ್ಯಕ್ಷ ಸಿ.ಎಸ್. ಚಿದಾನಂದ ರವರ ನೇತೃತ್ವದಲ್ಲಿ ನಡೆದ ಈ ಒಂದು ದಿನದ ಕ್ರೀಡಾಕೂಟ ಗ್ರಾಮದ ಸೊಬಗನ್ನು ಹೆಚ್ಚಿಸಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಮಲೆನಾಡಿನ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಹೊತ್ತು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗುತ್ತಿದೆ. ಗದ್ದೆಗಳನ್ನು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಆದರೆ ಗದ್ದೆಗಳನ್ನು ಉಳಿಸಬೇಕು, ಕ್ರೀಡೆಗಳನ್ನು ಬೆಳೆಸಬೇಕು ಇದು ಈ ನಮ್ಮ ಮಲೆನಾಡಿನ ಸಂಸ್ಕೃತಿ ಎಂದರು.

ಗ್ರಾಮಾಭಿವೃದ್ಧಿ ಕಾರ್ಯದರ್ಶಿ ಬಿ.ಬಿ . ರಶಿನ್ ಕುಮಾರ್ ಹಾಗೂ ಕಿರಗಂದೂರು ಗ್ರಾಮದ ಗ್ರಾಮ ಅಭಿವೃದ್ಧಿ ಮಂಡಳಿ ಸದಸ್ಯರು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.