ಸಾರಾಂಶ
ಹುಬ್ಬಳ್ಳಿ: ಪ್ರತಿಯೊಬ್ಬರಲ್ಲಿರುವ ಆತ್ಮಚೈತನ್ಯವು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿದೆ ಎಂದು ಇಲ್ಲಿಯ ಅಭಿನವ ಸಿದ್ಧಾರೂಢ ಶ್ರೀಗಳು ಹೇಳಿದರು.
ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ವಿಶ್ವ ವೇದಾಂತ ಪರಿಷತ್ ವಿದ್ವತ್ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.ಈ ಆತ್ಮಚೈತನ್ಯವೇ ಆ ಪರಬ್ರಹ್ಮ, ಅಂದರೆ ಅದೇ ಸತ್ಯ ಅದನ್ನು ಕಾಣುವ ಗುರಿಯನ್ನು ಎಲ್ಲರೂ ಹೊಂದಬೇಕು. ಆಗ ಬದುಕು ಆನಂದಮಯವಾಗುವುದು. ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಅದೆಲ್ಲವೂ ಹುಸಿ. ಈ ಮಿಥ್ಯೆಯನ್ನು ಅರಿತು ಆತ್ಮಚೈತನ್ಯವೇ ಸತ್ಯ ಎಂದು ವೇದಾಂತ ಹೇಳುವುದು. ಸಾಮಾನ್ಯ ದೃಷ್ಟಿಗೆ ಅದು ಕಾಣುವುದಿಲ್ಲ. ಅದನ್ನು ಕಾಣಲು ಗುರು ಕೃಪೆ, ದೈವ ಕೃಪೆ ಬೇಕು. ಅದಕ್ಕಾಗಿ ಸಿದ್ಧಾರೂಢರಂತ ಮಹಾತ್ಮರ ಮಾರ್ಗದರ್ಶನವು ಅಗತ್ಯ ಎಂದರು.
ಕನಕಗಿರಿಯ ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವುದು ಎಂಬ ವೇದವಾಕ್ಯದಂತೆ ಬ್ರಹ್ಮಸತ್ಯದ ತಿಳಿವಳಿಕೆ ಬಂದರೆ ಮತ್ತೇನೂ ತಿಳಿಯುವುದು ಉಳಿಯುವುದಿಲ್ಲ. ಸಿದ್ದಾರೂಢ ಮಠ ಎಂದರೆ ಅದು ವೇದಾಂತ ಮಠ, ಇಲ್ಲಿ ರಾದ್ಧಾಂತ ಇಲ್ಲ. ವೇದಾಂತವಿದೆ. ಮಕ್ಕಳಿಗೂ ಸಿದ್ಧಾರೂಢರ ಪರಿಚಯ ಆಗಬೇಕು. ಆ ದಿಶೆಯಲ್ಲಿ ಪಠ್ಯದಲ್ಲಿ ಅವರ ಚರಿತ್ರೆ ಸೇರಬೇಕಾದ ಅಗತ್ಯವಿದೆ ಎಂದರು.ಹೈದರಾಬಾದಿನ ಆಚಾರ್ಯ ಪರಿಶುದ್ಧಾನಂದಗಿರಿ ಮಹಾರಾಜರು, ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಉಪ್ಪಾರಟ್ಟಿಯ ನಾಗಾನಂದ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದಭಾರತಿ ಸ್ವಾಮೀಜಿ, ಬೆಂಗಳೂರು ಸಿದ್ಧಾರೂಢ ಮಿಷನ್‌ನ ಆರೂಢ ಭಾರತಿ ಶ್ರೀಗಳು ಪ್ರವಚನ ನೀಡಿದರು. ಇಂಚಲ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಸಿದ್ಧಾರೂಢರ ಸಂದೇಶ ತಲುಪಲಿಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ, ಬೇರೆ ರಾಜ್ಯಗಳಲ್ಲಿ ಸಿದ್ಧಾರೂಢ ಸ್ವಾಮೀಜಿಯವರ ಮಠಗಳಿವೆ. ಲಕ್ಷಾಂತರ ಜನ ಭಕ್ತರಿದ್ದಾರೆ. ಎಲ್ಲೆಡೆ ಸಿದ್ಧಾರೂಢರ ಮಾರ್ಗದರ್ಶನವಿದೆ. ಇದು ಇನ್ನೂ ವ್ಯಾಪಕವಾಗಿ ತಲುಪುವಂತಾಗಲಿ. ಆ ದಿಶೆಯಲ್ಲಿ ವಿಶ್ವ ವೇದಾಂತ ಪರಿಷತ್ ಒಂದು ದೊಡ್ಡ ಪ್ರಯತ್ನ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ತಮ್ಮ ಪತ್ನಿ ಶಿಲ್ಪಾ ಶೆಟ್ಟರ್ ಜತೆ ಆಗಮಿಸಿ ವಿಶ್ವವೇದಾಂತ ಪರಿಷತ್ ವೇದಿಕೆಯಲ್ಲಿ ತತ್ವಾನುಸಂಧಾನ ಎಂಬ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಬಾಲ್ಯದಿಂದಲೂ ತಾವು ಇಲ್ಲಿಯ ಟ್ರಸ್ಟಿಯಾಗಿದ್ದ ತಮ್ಮ ತಂದೆಯವರ ಜತೆ ಬರುತ್ತಿರುವುದಾಗಿಯೂ, ಹುಂಡಿಯ ಹಣವನ್ನು ಎಣಿಕೆ ಮಾಡಿದ್ದಾಗಿಯೂ ಮಠದ ಜತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡರು.ಶೆಟ್ಟರ್ ದಂಪತಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಉದ್ಯಮಿ ಡಾ. ಸಿಎಸ್‌ವಿ ಪ್ರಸಾದ, ಮುಖಂಡರಾದ ದಶರಥ ವಾಲಿ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಅಧ್ಯಕ್ಷ ಕೆ.ಎಲ್. ಪಾಟೀಲ, ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿ ಬಾಳು ಮಗಜಿಕೊಂಡಿ ಸೇರಿದಂತೆ ಹಲವರಿದ್ದರು. ವಿಶ್ವವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಗಣೇಶಾನಂದ ಮಹಾರಾಜ ನಿರೂಪಿಸಿದರು.ಸಿದ್ಧಾರೂಢರಿಂದ ಅಧ್ಯಾತ್ಮ ಕ್ರಾಂತಿ: ಜೋಶಿಜಾತ್ಯತೀತ ಮಠವನ್ನು ಕಟ್ಟಿ ಯಾವ ಬೇಧವಿಲ್ಲದೇ ನಾಡಿನ ಸರ್ವ ಸದ್ಭಕ್ತರನ್ನು ಆಶೀರ್ವದಿಸಿರುವ ಸಿದ್ಧಾರೂಢ ಸ್ವಾಮೀಜಿ ಪರತಂತ್ರದಲ್ಲಿದ್ದ ಅವರ ಬಿಡುಗಡೆಗಾಗಿ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ ನೀಡಿದ ಮಹಾನುಭಾವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದಿರುವ ವಿಶ್ವ ವೇದಾಂತ ಪರಿಷತ್ ಸಭಾ ಕಾರ್ಯಕ್ರಮದಲ್ಲಿ ನಿಜಗುಣ ಶಿವಯೋಗಿಗಳ ಪರಮಾನುಭವ ಬೋಧೆ ಎಂಬ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದ ಲೋಕಮಾನ್ಯ ಬಾಲ ಗಂಗಾಧರ ಟಿಳಕರು ಚಳವಳಿ ಕುರಿತು ಇದ್ದ ಅನುಮಾನಗಳ ಪರಿಹಾರಕ್ಕೆ ಸಲಹೆ ಕೇಳಲು ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಗುರುಗಳ ವಾಣಿಯಿಂದ ಸ್ಪೂರ್ತಿ ಪಡೆದು ಪುಣೆಗೆ ಮರಳಿ ಉತ್ಸಾಹದಿಂದ ಮತ್ತೆ ಚಳವಳಿಯನ್ನು ಆರಂಭಿಸಿದರು ಎಂದರು.