ಜನಸಾಮಾನ್ಯರ ಆರೋಗ್ಯ ಕಾಪಾಡುವ ಔಷಧ ತಜ್ಞರ ಸೇವೆ ಶ್ಲಾಘನೀಯ: ಡಾ. ಭಂಡಾರಿ

| Published : Oct 01 2025, 01:01 AM IST

ಸಾರಾಂಶ

ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಸಹಾಯಕ ಔಷಧ ನಿಯಂತ್ರಕರ ಕಚೇರಿ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಿರಂತರ ಸೇವೆ ಸಲ್ಲಿಸುತ್ತಾ ಜನರ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ಔಷಧ ತಜ್ಞರ ಸೇವೆ ಶ್ಲಾಘನೀಯವಾದುದು ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ. ವಿ ಭಂಡಾರಿ ಹೇಳಿದರು.

ಅವರು ಮಂಗಳವಾರ ನಗರದ ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಸಹಾಯಕ ಔಷಧ ನಿಯಂತ್ರಕರ ಕಚೇರಿ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಔಷಧಿ ತಜ್ಞರಿಗೆ ತಾಳ್ಮೆ, ಸಹನೆ, ಮಾನವೀಯ ಗುಣ ಹಾಗೂ ಸಹಕಾರ ಭಾವನೆ ಇರಬೇಕು. ವೈದ್ಯರು ನೀಡಿದ ಚೀಟಿಗಳನ್ನು ಸರಿಯಾಗಿ ಗಮನಿಸಿ ಔಷಧಿ ನೀಡಿ ಅದನ್ನು ಕ್ಲಪ್ತ ಸಮಯದಲ್ಲಿ ತೆಗೆದುಕೊಳ್ಳುವಂತೆ ರೋಗಿಗಳಿಗೆ ಮಾಹಿತಿ ನೀಡಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವಿದ್ದು, ವೈದ್ಯರು ಹಾಗೂ ಔಷಧಿ ಪೂರೈಕೆದಾರರು ಇದನ್ನು ಸಮರ್ಥವಾಗಿ ಎದುರಿಸಬೇಕು. ಔಷಧಿ ಪೂರೈಕೆದಾರರು ತಮ್ಮಲ್ಲಿರುವ ಔಷಧಿಗಳ ಪೂರ್ವಾಪರಗಳ ಕುರಿತು ಮಾಹಿತಿ ಹೊಂದಿರಬೇಕು ಎಂದರು.ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಔಷಧ ತಜ್ಞರಾದ ಬಿ ಗಣಪತಿ ಕಾಮತ್, ಪಿ.ರಮೇಶ್ ನಾಯಕ್, ಭೋಜರಾಜ ಶೆಟ್ಟಿ, ಮೋಹನ್ ಆಚಾರ್ಯ, ದಯಾನಂದ ಪ್ರಭು, ಟಿ.ಪ್ರೇಮಚಂದ್ರ ಪೈ, ದಿನಕರ ಪ್ರಭು, ಜಯಪ್ರಕಾಶ್ ಶೆಟ್ಟಿ ಹಾಗೂ ತ್ರಿವಿಕ್ರಮ್ ಶೆಣೈ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ್, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಮೇಶ್ ನಾಯಕ್, ಔಷಧಿ ಪೂರೈಕೆದಾರ ಮನೋಹರ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ವಿ.ಜಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಸ್ವಾಗತಿಸಿ, ಸತೀಶ್ಚಂದ್ರ ನಾಯಕ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ವಂದಿಸಿದರು.