ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶದ ಜನರ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಕುಟುಂಬ ಬಿಟ್ಟು ವರ್ಷಾನುಗಟ್ಟಲೆ ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರ ಸೇವೆ ವರ್ಣಿಸಲು ಸಾಧ್ಯವಿಲ್ಲ ಎಂದು ಡಿವೈಎಸ್‌ಪಿ ಬಿ.ಚಲುವರಾಜು ಹೇಳಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಪಟ್ಟಣದ ಆಟೋ ಚಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ರಾಷ್ಟ್ರದ ಮೇಲೆ ನೆರೆ ರಾಷ್ಟ್ರಗಳು ದಾಳಿ ಮಾಡಿದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಮ್ಮ ದೇಶದ ಸೈನಿಕರು ವಿರೋಧಿಗಳನ್ನು ಸೆದೆಬಡಿದು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ನಾವು ಶಾಂತಿ ನೆಮ್ಮದಿಯಿಂದ ಇದ್ದೇವೆಂದರೆ ಅದಕ್ಕೆ ನಮ್ಮ ಹೆಮ್ಮೆಯ ಸೈನಿಕರೇ ಕಾರಣ. ನಾವೆಲ್ಲರೂ ಸೈನಿಕರ ಪರಿಶ್ರಮ ಮತ್ತು ಸಾಹಸವನ್ನು ಸ್ಮರಿಸಿಕೊಳ್ಳಬೇಕು ಎಂದರು.

ಎಆರ್‌ಟಿಒ ಹೊನ್ನೇಗೌಡ ಮಾತನಾಡಿ, ಗಡಿಭಾಗದಲ್ಲಿ ಹಗಲಿರುಳು ದೇಶವನ್ನು ಕಾಯುತ್ತಿರುವ ಸೈನಿಕರ ತ್ಯಾಗ ಬಲಿದಾನದಿಂದಾಗಿ ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರು ಸುಭಿಕ್ಷರಾಗಿ ನೆಮ್ಮದಿಯಾಗಿ ಊಟ ಮಾಡಿ ನಿದ್ರೆ ಮಾಡುತ್ತಿದ್ದೇವೆ. ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬಿದ್ದಂತೆ. ಸೈನಿಕರ ಪರಿಶ್ರಮದಿಂದಾಗಿ ನಮ್ಮ ದೇಶದ ಇತರೆ ದೇಶಕ್ಕೆ ಮಾದರಿಯಾಗಿದೆ ಎಂದರು.


ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಚನ್ನಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೇಶಪ್ರೇಮದ ಮೌಲ್ಯಗಳನ್ನು ತಲುಪಿಸುವುದು ಅತ್ಯಗತ್ಯ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ನಾಗರಿಕರಲ್ಲಿಯೂ ಕೂಡ ದೇಶಪ್ರೇಮ ಸದಾ ನೆಲೆಸಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಲ್ಲಿ ದೇಶ ಪ್ರೇಮ, ಯೋಧರ ತ್ಯಾಗ ಬಲಿದಾನದ ಕುರಿತು ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು ಎಂದರು.

ಕಾರ್ಗಿಲ್ ವಿಜಯೋತ್ಸವ ದಿನದ ಮಹತ್ವ ಕುರಿತು ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಟಿ.ಸಿ.ಕುಮಾರ್ ಮಾತನಾಡಿ ಅರಿವು ಮೂಡಿಸಿದರು. ನಂತರ ಅಮರ್ ಜವಾನ್ ಚಿತ್ರವನ್ನು ತೆರದ ವಾಹನದಲ್ಲಿರಿಸಿ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದ ವರೆಗೆ ಮೆರವಣಿಗೆ ನಡೆಸಲಾಯಿತು.

ತಾಲೂಕಿನ ಮಾಜಿ ಸೈನಿಕರ ಸಂಘದ ಸದಸ್ಯರು, ಕುಟುಂಬಸ್ಥರು, ಪಟ್ಟಣದ ಶ್ರೀಕುವೆಂಪು ಶಾಲೆ ವಿದ್ಯಾರ್ಥಿಗಳು, ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ದೇಶಭಕ್ತರು, ಆಟೋ ಚಾಲಕರು ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದರು.

ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆ ಶ್ರೀ ಕುವೆಂಪು ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅಮರ್ ಜವಾನ್ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಮರೀಗೌಡ, ಉಪಾಧ್ಯಕ್ಷ ಬಿ.ನಾರಾಯಣ, ಕಾರ್ಯದರ್ಶಿ ಟಿ.ಸಿ.ಕುಮಾರ್, ಟಿ.ಎನ್.ಪ್ರಕಾಶ್, ಖಜಾಂಚಿ ಎಸ್.ನಾಗರಾಜ್, ನಿವೃತ್ತ ದೈಹಿಕ ಶಿಕ್ಷಕ ಶಿವಣ್ಣಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್, ಆರ್‌ಎಸ್‌ಎಸ್ ಮುಖಂಡ ವಸಂತಕುಮಾರ್, ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ಇದ್ದರು.