ಸಾರಾಂಶ
ಬಳ್ಳಾರಿ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ನಿರ್ವಹಿಸುತ್ತಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಯುವಜನರ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಧಾಕೃಷ್ಣ ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿ ಯುವಕ/ಯುವತಿಯರಿಗೆ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೌಶಲ್ಯಕ್ಕೆ ಆದ್ಯತೆಯಿಲ್ಲ. ಯುವ ಸಮುದಾಯ ನಾನಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯೋಗಶೀಲತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ದೇಶದ ಆರ್ಥಿಕ ಉನ್ನತೀಕರಣಕ್ಕೂ ಲಾಭದಾಯಕವಾಗಲಿದೆ. ಯುವಕರು ತಾವು ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆಗೆ ಮುನ್ನುಗ್ಗಬೇಕು. ಜೀವನಶೈಲಿ ಉತ್ತಮಗೊಳಿಸಿಕೊಳ್ಳಬೇಕು. ಮುಖ್ಯವಾಗಿ ಯುವ ಸಮುದಾಯ ಸ್ವಾಭಿಮಾನ ಮೈಗೂಡಿಸಿಕೊಳ್ಳಬೇಕು. ಬೇರೆ ಭಾಷೆಯ ಸಂವಹನಕ್ಕೆ ಇಂಗ್ಲಿಷ್ ಕಲಿಕೆ ಬಹಳ ಮುಖ್ಯ. ಯುವಕರು ಇಂಗ್ಲಿಷ್ ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಕೈಗೊಳ್ಳುವ ಕಾರ್ಯಗಳಿಗೆ ವೀವಿ ಸಂಘ ಸಹಕಾರ ನೀಡಲಿದೆ ಎಂದರು.ಸಂಸ್ಥೆಯ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿದರು. ಸಿ. ಶ್ರೀನಿವಾಸರಾವ್ , ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಶಶಿಕಾಂತ ವೀರಾಪುರ, ಮೆರ್ಸಿ ಮೊನಿಶಾ ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಕಾರ್ಯಕ್ರಮ ನಿರ್ವಹಿಸಿದರು.ಸಂಸ್ಥೆಯ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.