ಬಾತಿ ಗುಡ್ಡದಲ್ಲಿ ನಿವೇಶನ ಯೋಜನೆ ಅವೈಜ್ಞಾನಿಕ

| Published : Aug 14 2024, 12:49 AM IST

ಬಾತಿ ಗುಡ್ಡದಲ್ಲಿ ನಿವೇಶನ ಯೋಜನೆ ಅವೈಜ್ಞಾನಿಕ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ ನಿವೇಶನ ಮಂಜೂರು ಮಾಡಲು ತಾಲೂಕಿನ ದೊಡ್ಡ ಬಾತಿ ಗ್ರಾಮದ ಕಸಬಾ ಹೋಬಳಿ ರಿ.ಸ.ನಂ. 240ರ ಬಳಿ ರಿ.ಸ.ನಂ. 300ರಲ್ಲಿ 5 ಎಕರೆ ಹಾಗೂ ರಿ.ಸ.ನಂ. 301ರಲ್ಲಿ 1 ಎಕರೆ ಜಮೀನನ್ನು ನಿವೇಶನ ಮಾಡಲು ಆದೇಶಿಸಲಾಗಿದೆ. ಇದನ್ನು ಜಿಲ್ಲಾಡಳಿತ ತಕ್ಷಣ ಹಿಂಪಡೆದು, ಬೇರೆ ಸ್ಥಳದಲ್ಲಿ ಬಡವರಿಗೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ಜನರ ಕಾಳಜಿ ಇದ್ದರೆ ಸಮತಟ್ಟು ಪ್ರದೇಶದಲ್ಲಿ ನಿವೇಶನ ಮಾಡಲಿ: ಎಂ.ಜಿ.ಶ್ರೀಕಾಂತ - - -ಕನ್ನಡಪ್ರಭ ವಾರ್ತೆ, ದಾವಣಗೆರೆ ಬಡವರಿಗೆ ನಿವೇಶನ ಮಂಜೂರು ಮಾಡಲು ತಾಲೂಕಿನ ದೊಡ್ಡ ಬಾತಿ ಗ್ರಾಮದ ಕಸಬಾ ಹೋಬಳಿ ರಿ.ಸ.ನಂ. 240ರ ಬಳಿ ರಿ.ಸ.ನಂ. 300ರಲ್ಲಿ 5 ಎಕರೆ ಹಾಗೂ ರಿ.ಸ.ನಂ. 301ರಲ್ಲಿ 1 ಎಕರೆ ಜಮೀನನ್ನು ನಿವೇಶನ ಮಾಡಲು ಆದೇಶಿಸಲಾಗಿದೆ. ಇದನ್ನು ಜಿಲ್ಲಾಡಳಿತ ತಕ್ಷಣ ಹಿಂಪಡೆದು, ಬೇರೆ ಸ್ಥಳದಲ್ಲಿ ಬಡವರಿಗೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಏಕೈಕ ಗುಡ್ಡದ ಪರಿಸರವಾದ ದೊಡ್ಡಬಾತಿ ಗುಡ್ಡದ ವ್ಯಾಪ್ತಿಯನ್ನು ಉಳಿಸಿಕೊಳ್ಳಬೇಕು. ಆ ಮೂಲಕ ಪರಿಸರವನ್ನು ಕಾಪಾಡುವ ಕೆಲಸವನ್ನು ಜಿಲ್ಲಾಡಳಿತ ಮೊದಲು ಮಾಡಬೇಕು ಎಂದರು.

ದೊಡ್ಡಬಾತಿ ಗ್ರಾಪಂ ಅಧ್ಯಕ್ಷರು 2024ರ ಫೆ.13ರಂದು ದಾವಣಗೆರೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಆ ಪತ್ರದಂತೆ ವಲಯ ಅರಣ್ಯಾಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಸ್ತಾಪಿಸಿದ ರಿ.ಸ.ನಂ.ನಲ್ಲಿ ಸುಮಾರು 25-30 ವರ್ಷದ ಗಿಡ- ಮರಗಳಿವೆ. ವಿವಿಧ ಪ್ರಬೇಧಗಳ ಪಕ್ಷಿಸಂಕುಲಗಳ ಆಶ್ರಯ ತಾಣವೂ ಆಗಿದೆ. ಈಗ ಅದೇ ಗುಡ್ಡಕ್ಕೆ ಸಂಚಕಾರ ತರುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಅಧಿಕಾರಿಗಳು ಬಾತಿ ಗುಡ್ಡಗಳಲ್ಲಿ ಬಡವರಿಗೆ ನಿವೇಶನ ಮಾಡಲು ಜಾಗ ಮಂಜೂರು ಮಾಡಿದರೆ, ಮರಗಳನ್ನು ಕಡಿದು, ಮಣ್ಣು ಬಗೆಯಲಾಗುತ್ತದೆ. ವಯನಾಡು, ಪಶ್ಚಿಮಘಟ್ಟ ಸೇರಿದಂತೆ ಅನೇಕ ಕಡೆ ಗುಡ್ಡ ಕುಸಿತದ ದುರ್ಘಟನೆಗಳು ನಮ್ಮ ಕಣ್ಣ ಮುಂದಿವೆ. ಹೀಗಿರುವಾಗ ಗುಡ್ಡದ ಮೇಲೆ ಮನೆಗಳ ಕಟ್ಟಲು ಅನುಮತಿ ನೀಡಿ, ಮತ್ತಷ್ಟು ಅಪಾಯ, ಅನಾಹುತಗಳಾಗಲು ಅಧಿಕಾರಿಗಳೇ ನೇರ ಹೊಣೆ ಆಗುತ್ತಿರುವುದು ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯೂ ಮಾಹಿತಿ ನೀಡುವಾಗ ಬಾತಿ ಗುಡ್ಡದ ಮರಗಳನ್ನು ಉಳಿಸುವ ಬಗ್ಗೆಯಾಗಲೀ, ಅವುಗಳ ಸಂರಕ್ಷಣೆ ವಿಚಾರದ ಬಗ್ಗೆಯಾಗಲೀ, ಅಲ್ಲಿ ಯಾವ್ಯಾವ ಜಾತಿಯ ಮರಗಳಿವೆ ಎಂಬ ಬಗ್ಗೆ ಯಾವುದೇ ಅಂಕಿ ಅಂಶಗಳನ್ನೇ ನೀಡಿಲ್ಲ. ಬಾತಿ ಗುಡ್ಡದಲ್ಲಿರುವ ಗಿಡ- ಮರಗಳು, ಪಕ್ಷಿ ಸಂಕುಲಗಳಿಗೆ ಆಸರೆಯಾಗಿರುವ ವಿಚಾರ ಅರಣ್ಯ ಇಲಾಖೆ ಸರ್ಕಾರಕ್ಕೆ ಯಾಕೆ ವಿವರಿಸಿಲ್ಲ? ಅರಣ್ಯ ಹೊಂದಿರುವ ಗುಡ್ಡವನ್ನು ಇಲಾಖೆ ತನ್ನ ಸುಪರ್ದಿಗೆ ನೀಡುವಂತೆ ಯಾಕೆ ಕೇಳಿಲ್ಲ? ಏಕಾಏಕಿ ಗುಡ್ಡದ ಮೇಲಿನ ಮರಗಳನ್ನು ಕಡಿಯುವ ಪ್ರಯತ್ನ ಶುರುವಾಗಿದೆ. ಇದನ್ನೆಲ್ಲಾ ಗಮನಿಸಿದರೆ ಇದರ ಹಿಂದೆ ಭೂ ಮಾಫಿಯಾ ಇರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಇದೇ ರೀತಿ ಪ್ರಕೃತಿ ಸಹಜ ಗುಡ್ಡದ ಮೇಲೆ ದೌರ್ಜನ್ಯ ನಡೆದರೆ, ಅದಕ್ಕೆ ಅಧಿಕಾರಿಗಳು ಮುಂದೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಕಾನೂನು ಹೋರಾಟದ ಎಚ್ಚರಿಕೆ:

ಮುಖ್ಯಮಂತ್ರಿ, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿ, ಅರಣ್ಯ ಸಚಿವರ ಕಚೇರಿಗೆ ದೊಡ್ಡಬಾತಿ ಗುಡ್ಡ ಮತ್ತು ಅಲ್ಲಿನ ಅರಣ್ಯ ಹಾಗೂ ಪಕ್ಷಿ ಸಂಕುಲವನ್ನು ರಕ್ಷಿಸುವಂತೆ ಮನವಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೂ ಮನವಿ ಮಾಡಿದ್ದೇವೆ. ಆಕಸ್ಮಾತ್ ಬಾತಿ ಗುಡ್ಡ ಕುಸಿದರೆ ಅಪಾಯವೂ ತಪ್ಪಿದ್ದಲ್ಲ. ದಶಕದ ಹಿಂದೆ ಇದೇ ಬಾತಿ ಗುಡ್ಡವನ್ನು ಕಡಿಯಲು ಮುಂದಾಗಿದ್ದ ವೇಳೆ ಮಾಧ್ಯಮಗಳ ಕಾಳಜಿಯಿಂದಾಗಿ ಗುಡ್ಡ ಉಳಿದಿದೆ. ಈಗ ನಿವೇಶನ ಹಂಚಿಕೆ ಹೆಸರಿನಲ್ಲಿ ಜಾಗ ಹಂಚದೇ, ಬೇರೆ ಸ್ಥಳದಲ್ಲಿ ನಿವೇಶನ ನೀಡಲಿ. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಬೇಕಾದೀತು ಎಂದು ಎಂ.ಜಿ. ಶ್ರೀಕಾಂತ ಎಚ್ಚರಿಸಿದರು.

ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್.ದೇವರಮನಿ ಮಾತನಾಡಿ, ಸರ್ಕಾರಿ ಜಾಗದಲ್ಲಿ ಮರ- ಗಿಡಗಳು ಬೆಳೆದಿದ್ದರೆ, ಅವುಗಳನ್ನು ಸರ್ವೇ ಮಾಡಿಸಿ, ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಪಕ್ಷಿ, ಪ್ರಾಣಿ ಸೇರಿದಂತೆ ಜೀವ ಸಂಕುಲ ಉಳಿಸಲಿ. ಈಗ ಮೂಲಕ ಪರಿಸರ ಸಮತೋಲನ ಕಾಪಾಡಲಿ. ಬಾತಿ ಗುಡ್ಡದ ಅರಣ್ಯದಲ್ಲಿ ಯಥಾಸ್ಥಿತಿ ಕಾಪಾಡಬೇಕು. ಇಂತಹ ಅಪರೂಪದ ಸ್ಥಳವನ್ನು ಬಡವರಿಗೆ ನಿವೇಶನಕ್ಕಾಗಿ ಹಂಚಿಕೆ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಆಲೋಚಿಸಲಿ. ನಿವೇಶನ ಬಡವರಿಗೆ ಕೊಡಲೇಬೇಕೆಂದಿದ್ದರೆ ಗುಡ್ಡದ ಜಾಗವೇ ಯಾಕೆ? ಬೇರೆ ಕಡೆ ಸಮತಟ್ಟಾದ ಪ್ರದೇಶದಲ್ಲಿ ನೀಡಿ, ಬಡವರಿಗೆ ಸೂರು ನೀಡಲಿ ಎಂದು ಒತ್ತಾಯಿಸಿದರು.

ಪರಿಸರ ಪ್ರೇಮಿಗಳಾದ ಕೆ.ಟಿ.ಗೋಪಾಲಗೌಡ, ಯು.ಶ್ರೀನಿವಾಸ, ಇ.ಬಸವರಾಜ, ಕೆ.ಎನ್.ರವಿಕುಮಾರ ಇತರರು ಇದ್ದರು.

- - -

ಟಾಪ್‌ ಕೋಟ್‌

ಪೌರ ಕಾರ್ಮಿಕರಿಗೆ ನೀಡಿದಂತೆ ಜಿ+2 ಮಾದರಿಯಲ್ಲಿ ಸರ್ಕಾರದಿಂದ ಬಡವರಿಗೆ ಮನೆ ಕಟ್ಟಿಕೊಡಲಿ. ಬಾತಿಗುಡ್ಡದಲ್ಲಿ ಬಡವರಿಗೆ ಸೂರು ನೀಡುವ ಬದಲು, ಗ್ರಾಮದ ಸರ್ಕಾರಿ ಜಾಗದಲ್ಲಿ ಬಹು ಮನೆಗಳನ್ನು ಒಂದೇ ಜಾಗದಲ್ಲಿ ಕಟ್ಟಿಕೊಟ್ಟರೆ ಸಮಸ್ಯೆ ಆಗುವುದಿಲ್ಲ. ಇಂತಹ ಅನುಕೂಲ ಆಗುವಂತಹ ಬದಲಾವಣೆಗಳ ಬಗ್ಗೆಯೂ ಜಿಲ್ಲಾಡಳಿತ, ತಾಲೂಕು ಆಡಳಿತ ಗಮನಹರಿಸಲಿ

- ಎಂ.ಜಿ.ಶ್ರೀಕಾಂತ, ಸಾಮಾಜಿಕ ಕಾರ್ಯಕರ್ತ

- - - -13ಕೆಡಿವಿಜಿ3:

ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ.ಶ್ರೀಕಾಂತ, ಗಿರೀಶ ಎಸ್‌. ದೇವರಮನಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.