ಬಸವಾದಿ ಶರಣರ ಷಟಸ್ಥಲ ಸಿದ್ಧಾಂತ ಆಧ್ಯಾತ್ಮ ಜಗತ್ತಿನ ಮೇರು ಪರ್ವತ ಎಂದು ನೌಬಾದ್ನ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಸಂತೋಷ ಹಂಗರಗಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೀದರ್
ಬಸವಾದಿ ಶರಣರ ಷಟಸ್ಥಲ ಸಿದ್ಧಾಂತ ಆಧ್ಯಾತ್ಮ ಜಗತ್ತಿನ ಮೇರು ಪರ್ವತ ಎಂದು ನೌಬಾದ್ನ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಸಂತೋಷ ಹಂಗರಗಿ ಅಭಿಪ್ರಾಯಪಟ್ಟರು.ಲಿಂಗಾಯತ ಮಹಾ ಮಠದಿಂದ ಇಲ್ಲಿಯ ಬಸವಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ 281ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವ ಮಂಡಿಸಿ ಹಂತ ಹಂತವಾಗಿ ಪರಮಾತ್ಮನಲ್ಲಿ ಬೆರೆಯುವ ಕ್ರಮವೇ ಷಟಸ್ಥಲ ಸಿದ್ಧಾಂತ ಎಂದು ಹೇಳಿದ ಅವರು ಪರಮಾತ್ಮನನ್ನು ಸದಾ ಅನುಭವಿಸುತ್ತಿರಬೇಕು. ಹೊಟ್ಟೆಕಿಚ್ಚಿಗಾಗಿ ಬದುಕದೇ ಭಕ್ತಿಗಾಗಿ ಬದುಕಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ವಚನ ಸಂದೇಶ ಸಾರಲು ಜನ್ಮ ತಳೆ ದವರು ಅಕ್ಕ ಅನ್ನಪೂರ್ಣತಾಯಿ. ಪ್ರವಚನಗಳ ಮೂಲಕ ನಾಡಿನಾದ್ಯಂತ ಬಸವ ಸಂದೇಶ ಸಾರಿದರು ಎಂದು ತಿಳಿಸಿದರು.ವಾರದ ಅನುಭವ ಮಂಟಪ, ಮಾಸಿಕ ಶರಣ ಸಂಗಮ, ಗುರುವಚನ ಪರುಷ ಕಟ್ಟೆ, ಲಿಂಗಾಯತ ಧರ್ಮ ಗ್ರಂಥ, ಮರಣವೇ ಮಹಾನವಮಿ ಉತ್ಸವ, ವಚನ ವಿಜಯೋತ್ಸವ ಅವರ ಕೊಡುಗೆಗಳಾಗಿವೆ. ಅಕ್ಕನವರ ಋಣ ತೀರಿಸಲು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಪರುಷ ಕಟ್ಟೆಯ ಚನ್ನಬಸವಣ್ಣ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರು ಸೂರ್ಯನಂತೆ ಲೋಕಕ್ಕೆ ಸದಾ ಬೆಳಕು ನೀಡುವವರು. ಸೂರ್ಯನಿಗೆ ಮಸಿ ಬಳಿಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಶರಣರ ಪ್ರಖರತೆ ನಂದಿಸಲು ಆಗುವುದಿಲ್ಲ. ಶರಣರು ಮೆಚ್ಚುವಂತೆ ಬದುಕಿದರೆ ಮಾತ್ರ ಅವರ ಕೃಪೆ ಸಾಧ್ಯ. ಶರಣನ ಸಂಭ್ರಮ ಲಿಂಗಪೂಜೆ, ಜಂಗಮ ಸೇವೆ ಹಾಗೂ ಅನುಭಾವಿಯಾಗಿ ಭವ ಗೆಲ್ಲುವುದಾಗಬೇಕು ಎಂದು ತಿಳಿಸಿದರು.ಸಾಹಿತಿ ರಮೇಶ ಮಠಪತಿ ಮಾತನಾಡಿದರು. ಜಿ.ಪಂ. ನಿವೃತ್ತ ವ್ಯವಸ್ಥಾಪಕ ಉಮೇಶ ಪಾಟೀಲ ಸಮ್ಮುಖ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ನಾಗಶೆಟ್ಟಿ ಸಿರ್ಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚನ್ನಬಸಪ್ಪ ಹಂಗರಗಿ, ಆರ್.ಕೆ. ಪಾಟೀಲ, ಅಶೋಕ್ ಎಲಿ, ಶ್ಯಾಮಲಾ ಎಲಿ, ನಿಷ್ಕಲಾ ರವಿ ಮುತ್ತಂಗೆ, ರೇಷ್ಮಾ ವೀರಶಟ್ಟಿ ಮುತ್ತಂಗೆ, ಕದಳಿಶ್ರೀ ಮುತ್ತಂಗೆ ಇದ್ದರು.
ರವಿ ಹಂಜ್ಗೆ ಕಠಿಣ ಶಿಕ್ಷೆಯಾಗಲಿ: ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಲೇಖಕ ರವಿ ಹಂಜ್ ಅವರನ್ನು ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಲಿಂಗಾಯತ ಮಹಾ ಮಠ ಆಗ್ರಹಿಸಿದೆ.ಶರಣ ಸಂಗಮದಲ್ಲಿ ಹಿರಿಯ ಸಾಹಿತಿ ರಮೇಶ ಮಠಪತಿ ಅವರು, ರವಿ ಹಂಜ್ ಬಸವಣ್ಣನವರಿಗೆ ಅವಮಾನ ಮಾಡಿರುವುದನ್ನು ಲಿಂಗಾಯತ ಮಹಾ ಮಠದಿಂದ ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ವಿವಾದಿತ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರದ ಕ್ರಮವನ್ನು ಮಠದಿಂದ ಸ್ವಾಗತಿಸಲಾಗುತ್ತದೆ.ಸಾಮಾಜಿಕ ನ್ಯಾಯ ಪ್ರತಿಷ್ಠಾಪಿಸಲು ಪರಿಶ್ರಮಿಸಿದ ಬುದ್ಧ, ಬಸವ, ಡಾ.ಅಂಬೇಡ್ಕರ್ ಮೊದಲಾದ ಮಹನೀಯರನ್ನು ಅಪಮಾನಿಸುವ ಮೂಲಕ ರಾತ್ರೋ ರಾತ್ರಿ ಪ್ರಸಿದ್ಧರಾಗ ಬಯಸುವ ನೀಚ ಮನೋಸ್ಥಿತಿಯವರು ಮತ್ತೆ ಮತ್ತೆ ಇಂಥ ಕೃತಿಗಿಳಿಯದಂತೆ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಬೇಡಿಕೆ ಮಂಡಿಸಿದರು.
--ಚಿತ್ರ 24ಬಿಡಿಆರ್60
ಬೀದರ್ನ ಬಸವಗಿರಿಯಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಉದ್ಘಾಟಿಸಿದರು.