ಸಾರಾಂಶ
ಶಿವಯೋಗಿಗಳ ಬದುಕೇ ಬಸವಮಯವಾಗಿತ್ತು. ಸಮಾಜ ಸುಧಾರಣೆಯೇ ಅವರ ಗುರಿಯಾಗಿತ್ತು ಎಂದು ಚಿತ್ತರಗಿ-ಇಲಕಲ್ಲ ಸಂಸ್ಥಾನಮಠದ ಪೀಠಾಧಿಪತಿ ಗುರುಮಹಾಂತ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಶಿವಯೋಗಿಗಳ ಬದುಕೇ ಬಸವಮಯವಾಗಿತ್ತು. ಸಮಾಜ ಸುಧಾರಣೆಯೇ ಅವರ ಗುರಿಯಾಗಿತ್ತು ಎಂದು ಚಿತ್ತರಗಿ-ಇಲಕಲ್ಲ ಸಂಸ್ಥಾನಮಠದ ಪೀಠಾಧಿಪತಿ ಗುರುಮಹಾಂತ ಶ್ರೀಗಳು ಹೇಳಿದರು.ಸಮೀಪದ ಚಿತ್ತರಗಿಯ ಮೂಲಮಠ ಶ್ರೀ ವಿಜಯಮಹಾಂತೇಶ್ವರ ಮಠದಲ್ಲಿ ಪರಮತಪಸ್ವಿ ಲಿಂ.ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಶರಣ ಸಂಸ್ಕೃತಿ ಮಹೋತ್ಸವದ ನಿಮಿತ್ತ ನಡೆದ ಅಥಣಿ ಮುರುಘೇಂದ್ರ ಶಿವಯೋಗಿಗಳ ಪುರಾಣ ಪ್ರವಚನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಥಣಿಯ ಮುರುಘೇಂದ್ರ ಶಿವಯೋಗಿಗಳು ವಿಭಿನ್ನ ಆಲೋಚನೆ ಹೊಂದಿ ಸಾಮಾನ್ಯ ಮನುಷ್ಯರ ಜೀವನ ಕ್ರಮಕ್ಕಿಂತ ಬೇರೆಯದೇ ಆದ ಸಮಾಜ ಸುಧಾರಣೆಗೆ ಆದ್ಯತೆ ನೀಡುವ ಮೂಲಕ ಹೆಜ್ಜೆಯಿಟ್ಟವರು. ಶಿವಯೋಗಿಗಳ ಬದುಕು ಬಸವಮಯವಾಗಿತ್ತು. ಅವರ ಜೀವನಪೂರ್ತಿ ಬಸವತತ್ವ ಅನುಷ್ಠಾನವೇ ತುಂಬಿತ್ತು. ಬಸವಣ್ಣನವರ ವಿಚಾರಧಾರೆಗಳನ್ನು ಅವರು ಅಪ್ಪಿ ಒಪ್ಪಿಕೊಂಡಿದ್ದರು. ಜಾತ್ಯಾತೀತ ನಿಲುವಿನ ವಿಚಾರವಾದಿಯಾಗಿದ್ದ ಶ್ರೀಗಳು ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಹೆಗಡೇವಾರರನ್ನು ಸಮೀಪಕ್ಕೆ ಕರೆದು ಬಸವತತ್ವಕ್ಕೆ ಪ್ರೇರಣೆಯಾದರು. ದಯೆ, ಮಾನವೀಯತೆ ಅವರ ಮೇರುಗುಣಗಳಾಗಿದ್ದವು. ಭೌತಿಕ ವಿಚಾರಕ್ಕಿಂಥ ಭೌದ್ಧಿಕ ವಿಚಾರಕ್ಕೆ, ಬಸವಾದಿ ಶರಣರ ಜೀವನಮೌಲ್ಯಕ್ಕೆ ಒತ್ತು ನೀಡಿದವರು ಎಂದರು. ಸೀತಮ್ಮ ಕಾಮ ಕಾರ್ಯಕ್ರಮ ಉದ್ಘಾಟಿಸಿದರು.ಗದಗಿನ ವೀರೇಶ್ವರ ಪುಣ್ಯಾಶ್ರಮದ ಶಿವಕುಮಾರ ಶಾಸ್ತ್ರಿಗಳು ಮಾತನಾಡಿದರು. ಆಳಂದ ತಾಲೂಕಿನ ಶಾಬಾದಿಯ ಅಪ್ಪಣ್ಣಪೀಠದ ರಾಜಶೇಖರ ಸ್ವಾಮೀಜಿ, ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಹಿರೇಮಠ, ಸೇವಾ ಸಮಿತಿ ಕಾರ್ಯಾಧ್ಯಕ್ಷ ಕುಮಾರ ಹಿರೇಮಠ, ಚಿತ್ತರಗಿ ಗ್ರಾಮದ ಹಿರಿಯರಾದ ರಾಮಣ್ಣ ಕಾಮಾ, ಗೌಡಪ್ಪ ಬೇವೂರ, ಶಿವು ಗಾದಿ, ಬಸಪ್ಪ ಬೇವೂರ, ಯಂಕಣ್ಣ ಬೇವೂರ, ಸಂಗಪ್ಪ ಕಾಮಾ ವೇದಿಕೆಯಲ್ಲಿದ್ದರು. ಇದೇ ವೇಳೆ ಪುರಾಣ ಪ್ರವಚನಕಾರ ಶಿವಕುಮಾರ ಶಾಸ್ತ್ರಿಗಳನ್ನು ಶ್ರೀಮಠದವತಿಯಿಂದ ಸನ್ಮಾನಿಸಲಾಯಿತು. ಸಂಗಣ್ಣ ನಿಂಗನಗೌಡರ ನಿರೂಪಿಸಿ, ಬಸವರಾಜ ಬೇವೂರ ವಂದಿಸಿದರು.