‘2013ರ ಸಿದ್ದುನೇ ಬೇರೆ, ಈಗಿನ ಸಿದ್ದುವೆ ಬೇರೆ’

| Published : Oct 05 2025, 01:00 AM IST

ಸಾರಾಂಶ

2013-18ರ ಸಿದ್ದರಾಮಯ್ಯನವರೇ ಬೇರೆ, ಈಗಿನ ಸಿದ್ದರಾಮಯ್ಯನೇ ಬೇರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

2013-18ರ ಸಿದ್ದರಾಮಯ್ಯನವರೇ ಬೇರೆ, ಈಗಿನ ಸಿದ್ದರಾಮಯ್ಯನೇ ಬೇರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರಿಗೆ ಇದ್ದ ಹಳೆ ಗತ್ತು ಈಗಿಲ್ಲ. 2013-18ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಬೇರೆ, ಈಗಿನ ಸಿದ್ದರಾಮಯ್ಯನೇ ಬೇರೆ. ಆಗ ಅವರು ಪಾದರಸದಂತೆ ಚುರುಕಾಗಿ ಕೆಲಸ ಮಾಡೋರು. ಆದರೆ, ಈಗ ಏನಾಗಿದೆಯೋ ಏನ್ ಕಥೆನೋ ಗೊತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಅವರಿಗೆ ಬೇರೆ, ಬೇರೆ ರೀತಿಯ ಒತ್ತಡ ಇದೆ ಎಂದು ಅಭಿಪ್ರಾಯಪಟ್ಟರು.

ಕೆಲವು ಸಲ ನಾಯಕನಾದವನಿಗೆ ಹೇಳದೆ ಇರುವಂತಹ ಒತ್ತಡ ಇರುತ್ತದೆ. ಈಗಲೂ ಅವರಿಗೆ ಅಂತಹ ಒತ್ತಡ ಇರಬಹುದು. ಆದರೆ, ಏನೇ ಆದರು ಕೂಡಾ, ಎಂತಹ ಸಂದರ್ಭ ಬಂದರು ಕೂಡಾ, ಸಿದ್ದರಾಮಯ್ಯನವರು ಮಾಡಿದ ಪುಣ್ಯದ‌ ಕಾರ್ಯಕ್ರಮ ಅಂದರೆ, ಅದು ‘ಅನ್ನಭಾಗ್ಯ’ ಕಾರ್ಯಕ್ರಮ. ಈಗಿನ ಯುವಜನತೆಗೆ ಹಸಿವಿನ ಮಹತ್ವ ಗೊತ್ತಿರಲಿಕ್ಕಿಲ್ಲ. ಆದರೆ, ‘ಅನ್ಯಭಾಗ್ಯ’ ಕಾರ್ಯಕ್ರಮದ ಮಹತ್ವ ಹಳಬರಿಗೆ ಗೊತ್ತಾಗುತ್ತೆ ಎಂದು ಹೇಳಿದರು.

ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು:

ಕೆಆರ್‌ಎಸ್‌ ಕಟ್ಟಲು ಆಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ನಾನು ಓದಿರುವ ಪ್ರಕಾರ, ಕನ್ನಂಬಾಡಿ ಕಟ್ಟೆಯನ್ನು ಪ್ರಾರಂಭ ಮಾಡಿದ್ದೆ ಟಿಪ್ಪು, ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅದು ಸಂಪೂರ್ಣವಾಯಿತು ಎಂದು ಕೆ.ಎನ್‌.ರಾಜಣ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಲ್ಲಿ ಸಂಪೂರ್ಣ ಮಾಡುವಾಗ ಹಣಕಾಸಿನ‌ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು‌ ಹೋಗಿ ಮುಂಬೈನಲ್ಲಿ ಮಾರುತ್ತಾರೆ ಎಂದರು. ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ. ಟಿಪ್ಪು ರೇಷ್ಮೆಯ ಜನಕ. ಪರ್ಷಿಯಾದಿಂದ ಕಡ್ಡಿ ತಂದಿದ್ದೇ ಟಿಪ್ಪು. ರಾಮನಗರದ ಎಲ್ಲಾ ಕಡೆ ಮುಸ್ಲಿಮರು ಹೆಚ್ಚು ರೇಷ್ಮೆ ಕೃಷಿ ಮಾಡುತ್ತಾರೆ ಎಂದರು.

ಟಿಪ್ಪು ಆನೆಗೆ ಕಣ್ಣು ಹೋದಾಗ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ಳುತ್ತಾನೆ. ಹರಕೆ ಮಾಡಿಕೊಂಡಾಗ ಆನೆಗೆ ಕಣ್ಣು ಬರುತ್ತದೆ. ಇವತ್ತು ನಂಜುಂಡೇಶ್ವರನ ಮೇಲೆ ಪಚ್ಚೆಯನ್ನು ನಂಜುಂಡೇಶ್ವರನ ಲಿಂಗದ ಮೇಲಿಟ್ಟು ಪೂಜೆ ಮಾಡುತ್ತಾರೆ. ಆಗಿನಿಂದ ಹಕ್ಕಿಂ ನಂಜುಂಡೇಶ್ವರ ಅಂತ ಹೆಸರು ಕೊಡೋದು. ಇದೆಲ್ಲಾ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಒಳ್ಳೆ ಅಂಶಗಳು. ನಮ್ಮ ಮಕ್ಕಳಿಗೆ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಸಬೇಕು. ಇತಿಹಾಸ ತಿರುಚಬಾರದು ಎಂದು ಹೇಳಿದರು.

ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಗಣತಿ ಹಾಗೂ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈಗ ನಡೆಯುತ್ತಿರುವುದರಲ್ಲಿ ಜಾತಿ ಬೇಕಾದರೆ ಬರೆಸಬಹುದು, ಬಿಡಬಹುದು. ಬರಿಯಲೇಬೇಕು ಅಂತಿಲ್ಲ.

-ಕೆ.ಎನ್‌.ರಾಜಣ್ಣ, ಮಾಜಿ ಸಚಿವ