ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಬ್ಯಾಡನೂರು ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಸಿಸಿರಸ್ತೆ,ಚರಂಡಿ,ವಿದ್ಯುತ್‌ ಹಾಗೂ ಶೌಚಾಲಯ ಇತರೆ ಮೂಲಭೂತ ಸಮಸ್ಯೆಯಿಂದ ಇಲ್ಲಿನ ಜನತೆ ನರಳುತ್ತಿದ್ದು, ಗ್ರಾಮಗಳ ಪ್ರಗತಿಗೆ ಸರ್ಕಾರ ಅನೇಕ ಯೋಜನೆ ಜಾರಿಪಡಿಸಿದ್ದರೂ ಅಭಿವೃದ್ಧಿಯ ಬೆಳಕು ಕಾಣುವಲ್ಲಿ ಹಿಂದೆ ಬಿದ್ದಿದ್ದು, ಬ್ಯಾಡನೂರು ಗೊಲ್ಲರಹಟ್ಟಿಯ ಜನತೆ ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ.

ಬ್ಯಾಡನೂರು ಗೊಲ್ಲರಹಟ್ಟಿ ಸರ್ಕಾರದ ದಾಖಲೆಗಳಲ್ಲಿ ಕಂದಾಯ ಗ್ರಾಮ ಎಂಬ ಮಾನ್ಯತೆ ಪಡೆದಿದ್ದು, ಗ್ರಾಮದಲ್ಲಿ ಸುಮಾರು 500 ಮನೆಗಳು ಹಾಗೂ 2000 ರಿಂದ 2800 ಜನಸಂಖ್ಯೆ ಇದೆ. ಮುಖ್ಯವಾಗಿ ಕಾಡುಗೊಲ್ಲ ಸಮುದಾಯದ ಜನರು ವಾಸವಾಗಿದ್ದು, ಅಭಿವೃದ್ಧಿಯ ಸ್ಪರ್ಶ ಮಾತ್ರ ಇಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆಯೇ ಇಲ್ಲ. ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಡುವ ದಾರಿಗಳಲ್ಲಿ ಸಂಚಾರ ಮಾಡುವುದು ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಲು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಅನೇಕ ಮನೆಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಲಭ್ಯವಾಗಿಲ್ಲ. ರಾತ್ರಿ ಸಮಯದಲ್ಲಿ ಕತ್ತಲೆಯ ನಡುವೆ ಬದುಕು ನಡೆಸಬೇಕಾದ ಅನಿವಾರ್ಯತೆ ಹಲವಾರು ಕುಟುಂಬಗಳಲ್ಲಿ ಕಾಡುತ್ತಿದೆ.

ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯ ಕೊರತೆ ಗ್ರಾಮಸ್ಥರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಶೌಚಾಲಯಗಳ ಕೊರತೆಯಿಂದ ಮಹಿಳೆಯರು ಹಾಗೂ ವೃದ್ಧರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಮೂಲ ಸೌಲಭ್ಯಗಳ ಅಭಾವದಿಂದ ಜೀವನ ಸಾಗಿಸಲು ಸಾಧ್ಯವಾಗದೆ ಅನೇಕ ಕುಟುಂಬಗಳು ದೊಡ್ಡ ಪಟ್ಟಣಗಳತ್ತ ವಲಸೆ ಹೋಗಿರುವುದು ಗ್ರಾಮದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕೆಲಸ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ ಜನರು ಊರು ತೊರೆದು ಹೋಗುತ್ತಿರುವ ದೃಶ್ಯ ಗ್ರಾಮಾಭಿವೃದ್ಧಿಯ ನಿಜಸ್ಥಿತಿಯನ್ನು ಬಿಂಬಿಸುತ್ತಿದೆ.


ಕೋಟ್‌... 1: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿದ್ದು ನಮ್ಮ ಗ್ರಾಮ ಅಭಿವೃದ್ಧಿ ಆಗಿಲ್ಲ.ನಾವು ಇಂದಿಗೂ ಹಿಂದುಳಿದ್ದಿದ್ದೇವೆ. ರಸ್ತೆನ್ನೇ ಶೌಚಾಲಯವಾಗಿ ಬಳಸಿಕೊಳ್ಳುತ್ತಿದ್ದೇವೆ. ಗ್ರಾಮದಲ್ಲಿ ಸಿಸಿ ರಸ್ತೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ನಮ್ಮಲ್ಲಿ ಗ್ರಾಮ ಠಾಣೆ ಜಾಗವು ಒತ್ತುವರಿ ಮಾಡಿದ್ದಾರೆ. - ನರಸಿಂಹರಾಜು.ಸ್ಥಳೀಯಕೋಟ್‌ 2 : ಪಟ್ಟಣಕ್ಕೆ ಕೇವಲ 7 ಕಿಮೀ ದೂರದಲ್ಲಿರುವ ಈ ಗ್ರಾಮ ಮೂಲಭೂತ ಸೌಕರ್ಯಗಳ ವಂಚಿತವಾಗಿದ್ದು. ಕಡತಕ್ಕೆ ಮತ್ತು ಗುತ್ತಿಗೆದಾರರು ಮಾತ್ರ ಅಭಿವೃದ್ಧಿ ಹೊಂದುತ್ತಿರುವುದು ನಾವು ಕಾಣಬಹುದಾಗಿದೆ. - ದೇವರಾಜ್. ಸ್ಥಳೀಯ.