ಕೆಎಚ್‌ಡಿಸಿ ನಿಗಮದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನೇಕಾರರ ಸಹಕಾರ ಅತ್ಯಗತ್ಯವಾಗಿದ್ದು, ನಿರಂತರ ಉದ್ಯೋಗ ಒದಗಿಸುವಲ್ಲಿ ನಿಗಮ ಬದ್ಧವಾಗಿದೆ ಎಂದು ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ್ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೆಎಚ್‌ಡಿಸಿ ನಿಗಮದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನೇಕಾರರ ಸಹಕಾರ ಅತ್ಯಗತ್ಯವಾಗಿದ್ದು, ನಿರಂತರ ಉದ್ಯೋಗ ಒದಗಿಸುವಲ್ಲಿ ನಿಗಮ ಬದ್ಧವಾಗಿದೆ ಎಂದು ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ್ ಹೇಳಿದರು.ಬನಹಟ್ಟಿಯ ಕೆಎಚ್‌ಡಿಸಿ ಪ್ರಧಾನ ಕಚೇರಿಗೆ ಸೋಮವಾರ ಭೆಟ್ಟಿ ನೀಡಿ ನೇಕಾರರ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ನೇಕಾರರ ಮಜೂರಿ ಶರ್ಟ್‌ಗೆ ಶೇ.೧೦ ಹಾಗೂ ಶೂಟಿಂಗ್ ಗೆ ಶೇ.೧೫ರಷ್ಟು ಹೆಚ್ಚಿಸಲಾಗಿದೆ. ಆದರೂ ಪ್ರಸಕ್ತ ವಿದ್ಯಮಾನ ಬದುಕಿನಲ್ಲಿ ಈ ವೇತನ ಸಾಲದು. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಮತ್ತಷ್ಟು ವೇತನ ಹೆಚ್ಚಳಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಯೋವೃದ್ಧ ನೇಕಾರರಿಗೆ ಮಾಸಾಶನ ನೀಡಬೇಕೆಂಬ ಮನವಿಗೆ ಸ್ಪಂದಿಸಿದ ಅಧಿಕಾರಿ, ಸರ್ಕಾರಕ್ಕೆ ಮಾಹಿತಿ ಒದಿಸಲಾಗುವುದೆಂದು ತಿಳಿಸಿದರು. ಕೈಮಗ್ಗ ನೇಯ್ಗೆಯಿಂದ ಮಜೂರಿ ಸಮಸ್ಯೆ ಒಂದೆಡೆಯಾದರೆ, ನೇಯ್ಗೆ ಮಾಡುವುದಕ್ಕೆ ಶರೀರ ಸ್ಪಂದಿಸುತ್ತಿಲ್ಲ. ಹಾಗಾಗಿ ಕೈಮಗ್ಗ ನೇಕಾರರಿಗೆ ಪವರ್‌ಲೂಮ್ ಒದಗಿಸಬೇಕೆಂದು ಮಹಿಳಾ ನೇಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.ಇವೆಲ್ಲದರ ಬಗ್ಗೆ ಅವಲೋಕಿಸಿದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ್, ಕೈಮಗ್ಗ ನೇಕಾರರ ಬೇಡಿಕೆಗಳಿಗೆ ಸ್ಪಂದಿಸಿ ಬರುವ ಏಪ್ರಿಲ್ ತಿಂಗಳಲ್ಲಿ ನೇಕಾರರನ್ನೊಳಗೊಂಡ ಮಹತ್ವದ ಸಭೆ ಕರೆಯಲಾಗುವುದೆಂದರು.
ನೆಲದ ಮೇಲೆ ಕುಳಿತ ಅಧಿಕಾರಿ: ಇಂದು ನಿಗಮದ ಸ್ಥಿತಿಗತಿ ಆಲಿಸಲು ಬಂದಿದ್ದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ್ ಸಭೆಯಲ್ಲಿ ಕುರ್ಚಿ ತೆಗೆಸಿ ನೇಕಾರರ ಜೊತೆಗೆ ನೆಲದ ಮೇಲೆ ಕುಳಿತು ಸಭೆ ನಡೆಸಿದ್ದು ಗಮನ ಸೆಳೆಯಿತು.ಆಡಳಿತಾಧಿಕಾರಿ ವಿಜಯಕುಮಾರ, ನೇಕಾರರಾದ ಸಿದ್ದಪ್ಪ ಗಂವಾರ, ರಾಜು ಹೂಗಾರ, ಮಲೀಕ ಜಮಾದಾರ, ಶ್ರೀಶೈಲ ಮುಗಳೊಳ್ಳಿ, ಸುಮಂಗಲಾ ಜಾಲಿಕಟ್ಟಿ, ಹೇಮಾ ಗೊಂದಕರ, ನಾಮದೇವ ಗೊಂದಕರ, ಹಜರತ್ ಮುಲ್ಲಾ ಸೇರಿದಂತೆ ಅನೇಕ ನೇಕಾರ ಮುಖಂಡರಿದ್ದರು.