ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ಪ್ರಕಾಶಾನಂದ ಸ್ವಾಮೀಜಿ

| Published : Oct 17 2024, 12:03 AM IST

ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ಪ್ರಕಾಶಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯಕ್ತ ಗಾಂಧಿ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ಹಾಗೂ ವ್ಯಸನಮುಕ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ರಾಣಿಬೆನ್ನೂರು: ಸ್ವಸ್ಥ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣದ ಜತೆ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಅನೇಕ ಯೋಜನೆಗಳ ಮೂಲಕ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀವಾಗಿದೆ ಎಂದು ಸ್ಥಳೀಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಪ್ರಕಾಶಾನಂದ ಸ್ವಾಮೀಜಿ ನುಡಿದರು. ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯಕ್ತ ಗಾಂಧಿ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ಹಾಗೂ ವ್ಯಸನಮುಕ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಮಾಡದ ಕೆಲಸಗಳನ್ನು ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಕುಟುಂಬ ಜೀವನ ಸರಳವಾಗಿ ನಡೆಸಲು ಉದ್ಯೋಗ ಕೌಶಲ್ಯದ ತರಬೇತಿ ನೀಡುತ್ತಿರುವುದಲ್ಲದೆ ವ್ಯಸನ ಮುಕ್ತ ಕುಟುಂಬವಾಗಿರಲಿ ಎಂಬ ಸಂಕಲ್ಪದಿಂದ ಮದ್ಯವ್ಯಸನ ಶಿಬಿರ ನಡೆಸುತ್ತಿದೆ. ಆ ಮೂಲಕ ಮಹಾತ್ಮ ಗಾಂಧೀಜಿ ಕನಸು ನನಸು ಮಾಡಲು ಮುಂದಾಗಿರುವುದರಿಂದ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಅರ್ಥ ಬಂದಿದೆ ಎಂದು ನುಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿರುವ ಜನಪರ ಕಾರ್ಯಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿರುವುದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.ಧಾರವಾಡದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ತಾಲೂಕು ನಿರ್ದೇಶಕ ಮಂಜುನಾಥಗೌಡ, ಮಂಜುನಾಥ ಮಡಿವಾಳರ, ಬಸವರಾಜ ಹುಲ್ಲತ್ತಿ, ಚಂದ್ರಶೇಖರ ಬಣಕಾರ, ಮಾರ್ತಂಡಪ್ಪ ನೇಕಾರ, ದೊಡ್ಡವೀರಭದ್ರಪ್ಪ ಮೋಟಗಿ ಮತ್ತು ಬುಳ್ಳಪ್ಪ ಬಣಕಾರ, ನಿತ್ಯಾನಂದ ಕುಂದಾಪುರ, ಸಿದ್ಧಾರೂಢ ಗುರುಂ, ರಾಘವೇಂದ್ರ ಇದ್ದರು. ಇದಕ್ಕೂ ಪೂರ್ವದಲ್ಲಿ ನಗರದ ಕುರಬಗೇರಿ ಕ್ರಾಸ್‌ನಿಂದ ಹೊರಟ ಜನಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಮುಡಿಸುವ ಮೂಲಕ ವೇದಿಕೆಯ ಕಾರ್ಯಕ್ರಮಕ್ಕೆ ಬಂದು ತಲುಪಿತು.