ಅಭಿಮಾನಿ ತಂಡದ ಜೆರ್ಸಿ ತೊಟ್ಟು ಕೊನೆಯುಸಿರೆಳೆದ ಸಮಾಜಸೇವಕಿ!

| Published : Aug 10 2024, 01:36 AM IST

ಸಾರಾಂಶ

ಈಶ್ವರ್ ಮಲ್ಪೆ ಅವರ ಅಭಿಮಾನಿಯಾಗಿದ್ದ ಉದ್ಯಾವರದ ನಿವಾಸಿ ಪ್ರದೀಪ್ ಅವರ ಪತ್ನಿ ಸೋನಿ ಮೃತಪಟ್ಟವರು. ಅನಾರೋಗ್ಯದ ಸಮಯದಲ್ಲಿ ನನಗೇನಾದರೂ ಹೆಚ್ಚು ಕಡಿಮೆ ಆದರೆ ನಾನು ಟೀಮ್ ಈಶ್ವರ ಮಲ್ಪೆ ಜೆರ್ಸಿ (ಟಿ ಶರ್ಟ್)ಯನ್ನು ಧರಿಸಿಯೇ ಸಾಯಬೇಕು ಎಂದು ಪತಿಯಲ್ಲಿ ಹೇಳಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಮಾಜ ಸೇವಕಿಯೊಬ್ಬರು ತನ್ನ ಅಚ್ಚುಮೆಚ್ಚಿನ ಸಮಾಜಸೇವಾ ತಂಡದ ಜೆರ್ಸಿಯನ್ನು ತೊಟ್ಟು, ತನ್ನ ಕೊನೆಯ ಆಸೆ ಈಡೇರಿಸಿಕೊಂಡು, ಕೊನೆಯುಸಿರೆಳೆದ ಘಟನೆ ಶುಕ್ರವಾರ ನಡೆದಿದೆ.

ಸಮುದ್ರಪಾಲಾಗುತ್ತಿದ್ದ ನೂರಾರು ಮಂದಿಯನ್ನು ರಕ್ಷಿಸಿದ, ಎಂಥೆಂಥ ಆಳದ ನದಿ, ಕೆರೆಗಳಿಂದ ಮೃತದೇಹಗಳನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಅವರ ಅಭಿಮಾನಿಯಾಗಿದ್ದ ಉದ್ಯಾವರದ ನಿವಾಸಿ ಪ್ರದೀಪ್ ಅವರ ಪತ್ನಿ ಸೋನಿ ಮೃತಪಟ್ಟವರು.

ಪತಿ ಪತ್ನಿ ಇಬ್ಬರೂ ಸಮಾಜಸೇವಕರು. ಜಿಲ್ಲಾಸ್ಪತ್ರೆಯಲ್ಲಿ ಮೃತರಾಗುವ ಅಸಹಾಯಕ ಅನಾಥರ ನೂರಾರು ಶವಗಳಿಗೆ ಮುಕ್ತಿ ನೀಡಿದ್ದಾರೆ. ತಮಗೆ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಧಾವಿಸಿ, ಅನಾಥ ಶವಗಳಿಗೆ ಹೆಗಲು ಕೊಡುವುದು ಮಾತ್ರವಲ್ಲದೇ, ಅಂತ್ಯಸಂಸ್ಕಾರಕ್ಕೆ, ಎಲ್ಲ ಅಂತಿಮ ಕ್ರಿಯೆಗಳನ್ನು ಮಾಡುವ ಪುಣ್ಯಜೀವಿಗಳವರು. ತಮ್ಮ ಈ ಸಮಾಜಸೇವೆಯಿಂದಾಗಿಯೇ ಅಪತ್ಬಾಂಧವ ಈಶ್ವರ ಮಲ್ಪೆ ಅವರ ಪರಿಚಯವಾಗಿದ್ದು, ಮಾತ್ರವಲ್ಲದೇ ಅವರ ಅಪ್ಪಟ ಅಭಿಮಾನಿಗಳೂ ಆಗಿದ್ದರು.

ಆದರೆ ಇತ್ತೀಚೆಗೆ ಸೋನಿ ಅವರು ಅಚಾನಕ್ ಆಗಿ ಅನಾರೋಗ್ಯ ಪೀಡಿತರಾದರು. ಕಳೆದ ಕೆಲವು ದಿನಗಳಿಂದ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಅವರಿಗೆ ತಾನಿನ್ನು ಬದುಕುವುದಿಲ್ಲ ಎಂದೆನಿಸಿತ್ತೋ ಏನೋ, ನನಗೇನಾದರೂ ಹೆಚ್ಚು ಕಡಿಮೆ ಆದರೆ ನಾನು ಟೀಮ್ ಈಶ್ವರ ಮಲ್ಪೆ ಜೆರ್ಸಿ (ಟಿ ಶರ್ಟ್)ಯನ್ನು ಧರಿಸಿಯೇ ಸಾಯಬೇಕು ಎಂದು ಪತಿಯಲ್ಲಿ ಹೇಳಿದ್ದರು.

ಗುರುವಾರ ರಾತ್ರಿ ಸೋನಿ ಅವರ ಅನಾರೋಗ್ಯ ತೀವ್ರಗೊಂಡಿದ್ದು, ಅವರ ಕೊನೆಯಾಸೆ ತಿಳಿದಿದ್ದ ಈಶ್ವರ್ ಮಲ್ಪೆ ಅವರು ಸೋನಿಯವರಿಗೆ ತಮ್ಮ ತಂಡದ ಜೆರ್ಸಿಯನ್ನು ತೊಡಿಸಿದ್ದರು. ಶುಕ್ರವಾರ ಸೋನಿ ಅವರ ದೇಹಾಂತ್ಯವಾಗಿದೆ.