ಮೈಸೂರು ವಿವಿ ಸ್ನಾತಕೋತ್ತರ (ಎಂಎ) ಕನ್ನಡ ವಿಭಾಗದಲ್ಲಿ ತಾಲೂಕಿನ ಕನ್ನೇರಮಡು ಗ್ರಾಮದ ರೈತ ದಂಪತಿಯ ಮಗ 13 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದು ಗಮನ ಸೆಳೆದಿದ್ದಾನೆ. ಮೈಸೂರು ವಿವಿ 106ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಸ್ವೀಕರಿಸಿದರು.
ಎಂ. ಪ್ರಹ್ಲಾದ್
ಕನಕಗಿರಿ : ಮೈಸೂರು ವಿವಿ ಸ್ನಾತಕೋತ್ತರ (ಎಂಎ) ಕನ್ನಡ ವಿಭಾಗದಲ್ಲಿ ತಾಲೂಕಿನ ಕನ್ನೇರಮಡು ಗ್ರಾಮದ ರೈತ ದಂಪತಿಯ ಮಗ 13 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದು ಗಮನ ಸೆಳೆದಿದ್ದಾನೆ.
ಸಮೀಪದ ಕನ್ನೇರಮಡು ಗ್ರಾಮದ ರೈತ ದಂಪತಿ ಪುತ್ರ ಚಂದ್ರಶೇಖರ ಸ್ನಾತಕೋತ್ತರ ಪದವಿ ಕನ್ನಡ ವಿಭಾಗದಲ್ಲಿ ತನ್ನದೆ ಆದ ಚಾಪು ಮೂಡಿಸಿದ್ದು, ಬರೊಬ್ಬರಿ 17 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಚೆಗೆ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿವಿ 106ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಸ್ವೀಕರಿಸಿದರು.
ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪದವಿ, ಮೈಸೂರಿನಲ್ಲಿ ಬಿಇಡಿ ವ್ಯಾಸಂಗ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಕುರಿತು ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದರು. ಈಗ ಸಹಾಯಕ ಪ್ರಾಧ್ಯಾಪಕರಾಗುವ ಗುರಿ ಅವರದ್ದಾಗಿದೆ.
ಲಭಿಸಿದ ಚಿನ್ನದ ಪದಕಗಳು: ನರಸಿಂಹಚಾರ್ಯ, ಟಿ.ಎನ್. ಶ್ರೀಕಂಠಯ್ಯ, ನರಸಮ್ಮ ನಾರಾಯಣಶೆಟ್ಟಿ, ರಾಮಚಂದ್ರರಾವ್, ಬಿ.ಎಸ್. ತಮ್ಮಯ್ಯ, ಎ.ಎಸ್. ಕಾಳೇಗೌಡ, ಎಚ್.ಕೆ. ಸುರ್ಯ ಶೆಟ್ಟಿ-ಸೀತಮ್ಮ, ವಿಶ್ವನಾಥರಾವ್ ರಘುನಾಥರಾವ್, ಎಚ್.ಎಸ್. ಶಂಕರಲಿಂಗೇಗೌಡ ಸೇರಿದಂತೆ 13 ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನ ಪಡೆದ ಚಂದ್ರಶೇಖರ ಸಾಧನೆಗೆ ಕನ್ನೇರಮಡುವಿನ ಜನ ಹೆಮ್ಮೆಪಡುತ್ತಿದ್ದಾರೆ.
ಸಾಧನೆಗೆ ಸ್ಫೂರ್ತಿಯಾದ ಶಿಕ್ಷಕ:
ಕನ್ನೇರಮಡು ಗ್ರಾಮದ ಸರ್ಕಾರಿ ಶಾಲೆಗೆ 2008ರಲ್ಲಿ ಶಿಕ್ಷಕರಾಗಿ ಬಂದಿದ್ದ ಸಿ.ಕೆ. ವೆಂಕಟೇಶ ಅವರ ಪಾಠ, ಬೋಧನೆಯಿಂದ ಪ್ರಭಾವಿತರಾದ ಚಂದ್ರಶೇಖರ ಈ ಅಪರೂಪದ ಸಾಧನೆ ಮಾಡಲು ಸಾಧ್ಯವಾಗಿದೆ. ಶಿಕ್ಷಕ ವೆಂಕಟೇಶ ಸತತ 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ಎರಡು ವರ್ಷಗಳ ಹಿಂದೆ ನಿರ್ಗಮಿಸಿದರು. ಆದರೆ ಅವರ ಪ್ರಭಾವ ಗ್ರಾಮದಲ್ಲಿ ಇನ್ನೂ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಬುನಾದಿ ಕಲಿಕೆ :
ನನಗೆ ಲಭಿಸಿದ ಚಿನ್ನದ ಪದಕ ಹಾಗೂ ನಗದು ಬಹುಮಾನ ನೆಚ್ಚಿನ ಶಿಕ್ಷಕ ವೆಂಕಟೇಶ ಅವರಿಗೆ ಸಲ್ಲಬೇಕು. ಪ್ರಾಥಮಿಕ ಹಂತದಲ್ಲಿ ಅವರ ಬುನಾದಿ ಕಲಿಕೆಯಿಂದಾಗಿಯೇ ಈ ಸಾಧನೆಗೆ ಸಾಧ್ಯವಾಗಿದೆ. ರೈತಾಪಿ ಕುಟುಂಬದ ನನ್ನಂತ ಸಾಮಾನ್ಯನಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಿದ ಎಲ್ಲ ಗಣ್ಯರಿಗೆ ಧನ್ಯವಾದ ಎಂದು ಮೈಸೂರು ವಿವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಚಂದ್ರಶೇಖರ ಹೇಳಿದರು.