ಸಾರಾಂಶ
ಹಾವೇರಿ: ಇಲ್ಲಿಗೆ ಸಮೀಪದ ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನೀರುನಾಯಿಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಕೌತುಕ ಹೆಚ್ಚಿದೆ. ಜತೆಗೆ ಅವುಗಳ ಎತ್ತರ, ಗಾತ್ರ ನೋಡಿ ಢವಢವವೂ ಶುರುವಾಗಿದೆ.
ಕೆಲವು ತಿಂಗಳುಗಳ ಹಿಂದೆ ಸಮೀಪದ ಹೆಗ್ಗೇರಿ ಕೆರೆಯಲ್ಲಿ ನೀರುನಾಯಿಗಳ ಹಿಂಡು ಕಾಣಿಸಿಕೊಂಡಿದ್ದವು. ಇದೀಗ ಅಂದಾಜು ೧೬ಕ್ಕೂ ಹೆಚ್ಚು ನೀರುನಾಯಿಗಳು ಚಿಕ್ಕಲಿಂದಹಳ್ಳಿಯ ಕೆರೆಯಲ್ಲಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿವೆ.ಕೆರೆಗಳಲ್ಲಿರುವ ಮೀನುಗಳನ್ನು ಹಿಡಿದು ತಿನ್ನುತ್ತಿರುವ ನೀರುನಾಯಿಗಳು, ಕೆಲ ದಿನಗಳಿಂದ ಅಲ್ಲಿಯೇ ಠಿಕಾಣಿ ಹೂಡಿವೆ. ಸಾಮಾನ್ಯವಾಗಿ ಕಂಡುಬರುವ ನೀರುನಾಯಿಗಳ ಗಾತ್ರಕ್ಕಿಂತ ದೊಡ್ಡದಾಗಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣವೂ ನಿರ್ಮಾಣವಾಗಿದೆ. ನೀರುನಾಯಿಗಳನ್ನು ನೋಡಲು ಗ್ರಾಮಸ್ಥರು ಕೆರೆ ಬಳಿ ಹೋಗುತ್ತಿದ್ದಾರೆ.
ಸಮುದ್ರದ ಹಿನ್ನೀರು ಹಾಗೂ ನದಿಗಳಲ್ಲಿ ಕಂಡುಬರುವ ನೀರುನಾಯಿಗಳ ಹಿಂಡು ಹಾವೇರಿ ಪರಿಸರದಲ್ಲಿ ಕಂಡುಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ಸಾಕಷ್ಟು ಮೀನು ಇರುವುದರಿಂದ ಹೆಗ್ಗೇರಿ ಕೆರೆಯಿಂದ ನೀರುನಾಯಿಗಳು ಇಲ್ಲಿಗೆ ಮೀನು ಬೇಟೆಯಾಡಲು ಬಂದಿರಬಹುದು ಎನ್ನಲಾಗುತ್ತಿದೆ.
ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ದೊಡ್ಡ ತೊರೆಗಳಲ್ಲಿ ಕಂಡು ಬರುವ ಫ್ರೆಶ್ ವಾಟರ್ ಓಟರ್ (ಸಿಹಿನೀರು ನಾಯಿ ) ಹಂಪಿಯ ಪರಿಸರದಲ್ಲಿನ ತುಂಗಭದ್ರಾನದಿಯಲ್ಲಿ ಕಂಡು ಬರುವುದು ಸಾಮಾನ್ಯ. ಜಿಲ್ಲೆಯ ಕೆಲವು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ತುಂಗಭದ್ರಾ ನೀರನ್ನು ಯುಟಿಪಿ ಕಾಲುವೆಗಳ ಮೂಲಕ ಹರಿಸಿದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿಯೋ, ಆಗಾಗ ವಲಸೆ ಹೋಗುವ ಇವುಗಳ ಗುಣದಿಂದಲೋ ಏನೋ? ನೀರು ನಾಯಿಗಳು ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ಪತ್ರಕರ್ತ ಮಾಲತೇಶ ಅಂಗೂರ.ನೀರು ನಾಯಿಗಳ ಪ್ರಮುಖ ಆಹಾರ ಮೀನು, ಇವುಗಳು ಪ್ರತ್ಯೇಕವಾಗಿ ಬೇಟೆಯಾಡುತ್ತವೆ. ಆದರೆ ಒಟ್ಟಿಗೆ ಮಲ ವಿಸರ್ಜನೆ ಮಾಡುವ ಮೂಲಕ ತಮ್ಮ ಗಡಿ ಗುರುತಿಸುವ ಕಾರ್ಯವನ್ನು ಇವು ಒಟ್ಟಿಗೆ ಮಾಡುತ್ತವೆ. ವೈರಿಗಳು ತಮ್ಮ ಪ್ರದೇಶಕ್ಕೆ ನುಗ್ಗದಂತೆ ಇವು ಎಚ್ಚರಿಕೆ ನೀಡುತ್ತವೆ. ವನ್ಯಜೀವಿಗೆ ಯಾವುದೇ ಗಡಿ ತಿಳಿದಿಲ್ಲ, ತನ್ನ ಸಂರಕ್ಷಣೆಗಾಗಿ ಹೋರಾಟ ಈ ಸಂರಕ್ಷಿತ ಪ್ರದೇಶದ ಹೊರಗೆ ನಡೆಯುತ್ತದಂತೆ. ನೀರುನಾಯಿಗಳು ಅರೆ-ಜಲ ಪ್ರಾಣಿಗಳಾಗಿವೆ. ದೇಶದಲ್ಲಿ ಮೂರು ಜಾತಿಗಳ ಪೈಕಿ ಚಿಕ್ಕ ನೀರುನಾಯಿ ಪ್ರಭೇದ ಹಾವೇರಿಯ ಪರಿಸರದಲ್ಲಿ ಕಂಡಿವೆ. ಹಾವೇರಿಯ ಪರಿಸರದಲ್ಲಿ ಪತ್ತೆಯಾಗಿರುವ ನೀರು ನಾಯಿ ಯಾವ ಪ್ರಬೇಧವಾಗಿದೆ ಎನ್ನುವುದನ್ನು ಸಂಶೋಧಿಸಬೇಕಿದೆ. ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ೧೬ ನೀರುನಾಯಿಗಳು ಕಂಡಿವೆ. ಇವುಗಳಲ್ಲಿ ಆರು ಮರಿಗಳು, ಆರು ದೊಡ್ಡ ಅಂದಾಜು ಸುಮಾರು ೧ ಮೀಟರ್‌ನಿಂದ ೨ ಮೀಟರ್ ಉದ್ದ ಇರುವ ನೀರು ನಾಯಿಗಳಿವೆ ಎಂದು ಮಾಲತೇಶ ಅಂಗೂರ ತಿಳಿಸಿದ್ದಾರೆ.
ನೀರು ನಾಯಿಗಳು ಹಲವಾರು ಕಿಮೀ ದಾಟಿ ಬಯಲು ಅರೆಮಲೆನಾಡು ಪ್ರದೇಶವಾಗಿರುವ ಹಾವೇರಿಯ ಪರಿಸರದಲ್ಲಿ ಕಾಣಿಸಿಕೊಂಡಿರುವುದು ಕೂಡ ಕುತೂಹಲ ಕೆರಳಿಸಿವೆ. ಈ ಬಗ್ಗೆ ಕಾಳಜಿ ಹೊಂದಿರುವರರು ಸಂಶೋಧನೆ ನಡೆಸಬೇಕು. ನೀರುನಾಯಿಗಳು ಕಾಣಿಸಿಕೊಂಡಿರುವ ಕೆರೆಯ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು. ನೀರುನಾಯಿಗಳ ರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಈಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವ ಮೂಲಕ ಚಿಕ್ಕಲಿಂಗದಹಳ್ಳಿಯ ಕೆರೆಗೆ ಮಳೆಗಾಲದ ಅತಿಥಿಯಾಗಿರುವ ಅಳುವಿನಂಚಿನಲ್ಲಿರುವ ನೀರುನಾಯಿಗಳನ್ನು (ಫ್ರೆಶ್ ವಾಟರ್ ಓಟರ್) ಸಂರಕ್ಷಿಸಲು ಮುಂದಾಗಬೇಕಿದೆ ಎಂಬುದು ಆಶಯವಾಗಿದೆ.