ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಭಾನುವಾರ ಅರುಣೋದಯದ ವೇಳೆ (5.30ಕ್ಕೆ) ರಾಜಮುಡಿ ಉತ್ಸವ ವೈಭವದಿಂದ ನೆರವೇರಿತು. ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾದು ರಾಜಮುಡಿಯ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿಗೆ ಭಾನುವಾರ ಅರುಣೋದಯದ ವೇಳೆ (5.30ಕ್ಕೆ) ರಾಜಮುಡಿ ಉತ್ಸವ ವೈಭವದಿಂದ ನೆರವೇರಿತು.

ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾದು ರಾಜಮುಡಿಯ ದರ್ಶನ ಪಡೆದರು. ದೇವಾಲಯದ ಮುಂಭಾಗ ನಾಲ್ಕೂ ಕಡೆಗಳಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರಿಗೆ ರಾಜಮುಡಿ ಉತ್ಸವದ ದರ್ಶನವನ್ನು ಮಾಡಿಸಿ ದೇವಾಲಯದ ಒಳಭಾಗ ಪಡಿಯೇತ್ತ ನೆರವೇರಿಸಿ ವೈರಮುಡಿ ಉತ್ಸವದ ಧಾರ್ಮಿಕ ಕೈಂಕರ್ಯಗಳನ್ನು ಸಮಾಪ್ತಿಗೊಳಿಸಲಾಯಿತು.

ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ವೈರಮುಡಿ ಕಿರೀಟವನ್ನು ಭಾನುವಾರವಾಗಿದ್ದರೂ ಸಹ ಪೊಲೀಸ್ ಭದ್ರತೆಯೊಂದಿಗೆ ಮಂಡ್ಯ ಜಿಲ್ಲಾ ಖಜಾನೆಗೆ ಕಳುಹಿಸಿಕೊಡಲಾಯಿತು. ವೈರಮುಡಿ ಬ್ರಹ್ಮೋತ್ಸವದ 5ನೇ ತಿರುನಾಳ್ ದಿನವಾದ ಭಾನುವಾರವೂ ಲಕ್ಷಾಂತರ ಭಕ್ತರು ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಂಜೆ ಪ್ರಹ್ಲಾದ ಪರಿಪಾಲನೋತ್ಸವ ನಂತರ ಗರುಡವಾಹನೋತ್ಸವ ನೆರವೇರಿತು.

ವೈರಮುಡಿ ಉತ್ಸವದ ಮಹಾ ಮಂಗಳಾರತಿಯ ವೇಳೆ ಪ್ರತಿವರ್ಷವೂ ಉಂಟಾಗುತ್ತಿದ್ದ ನೂಕಾಟ ತಳ್ಳಾಟವನ್ನು ಡೀಸಿ ಡಾ.ಕುಮಾರ ಮತ್ತು ಎಸ್ಪಿ ಡಾ.ಶೋಭಾರಾಣಿ ಖುದ್ದು ಹಾಜರಿದ್ದು ಸಮರ್ಪಕವಾಗಿ ನಿಯಂತ್ರಿಸಿದ ಕಾರಣ ಯಾವುದೇ ಗೊಂದಲ ಉಂಟಾಗಲಿಲ್ಲ. ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವನಾರಾಯಣಸ್ವಾಮಿ ದಂಪತಿ ಹಾಗೂ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ ಹಾಗೂ ಗಣ್ಯರು ಸುಗಮವಾಗಿ ದರ್ಶನ ಮಾಡುವಂವಂತಾಯಿತು. ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ, ಪುತ್ರ ಸೂರಜ್ ರೇವಣ್ಣ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದೇವರ ದರ್ಶನ ಪಡೆದರು.

ವೈರಮುಡಿ ಉತ್ಸವಕ್ಕೆ ಮಳೆ ಅಡ್ಡಿ

ಮೇಲುಕೋಟೆ:

ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವದ ವೇಳೆ ಪದೇ ಪದೇ ಮಳೆ ಬಂದು ಭಕ್ತರ ದರ್ಶನಕ್ಕೆ ಅಡ್ಡಿಯಾದ ಘಟನೆ ನಡೆಯಿತು. ಎಂಟು ದಶಕಗಳಲ್ಲೇ ಈ ರೀತಿ ಘಟನೆ ನಡೆದಿಲ್ಲ ಎಂದು ದೇವಾಲಯದ ಸೇವೆಯಲ್ಲಿ ತೊಡಗಿದ ಹಿರಿಯ ಕೈಂಕರ್ಯಪರರು ಮಾಹಿತಿ ಹಂಚಿಕೊಂಡರು.

ವೈರಮುಡಿ ಉತ್ಸವದ ರಾತ್ರಿ ಉದ್ದಕ್ಕೂ ನಡು ನಡುವೆಯೂ ಬರುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯಲ್ಲಿ ಉತ್ಸವ ಬೀದಿಗಳಲ್ಲಿ ಕಿಕ್ಕಿರಿದು ತುಂಬಿದ ಲಕ್ಷಾಂತರ ಭಕ್ತರು ಮಳೆಯಲ್ಲೇ ನೆನೆದಿದ್ದರೂ ಸ್ವಲ್ಪವೂ ವಿಚಲಿತರಾಗದೆ ಕಾದು ನಿಂತು ವೈರಮುಡಿ ದರ್ಶನ ಪಡೆದರು. ಮಳೆ ಬರುತ್ತಿದ್ದರೂ ಭಕ್ತರಿಗೆ ನಿರಾಸೆಯಾಗದಂತೆ ದೇವರನ್ನು ರಕ್ಷಣೆ ಮಾಡಿ ನಿಧಾನವಾಗೇ ಉತ್ಸವ ಮಾಡಿಸಲಾಯಿತು.

ಮಾರಿಗುಡಿ ಬೀದಿಯಲ್ಲಿ ಬಂದಾಗ ಮಳೆ ಸೋನೆ ಜಾಸ್ತಿಯಾದಾಗ ಮೊದಲು ಶ್ವೇತಛತ್ರಿ ನಂತರ ನಡುಚಪ್ಪರ ಹಿಡಿದು ದೇವರಿಗೆ ಮಳೆ ನೀರು ಬೀಳದಂತೆ ಮಾಡಿ ಪ್ರತಿ ವರ್ಷದಂತೆಯೇ ಎಲ್ಲಾ ಉತ್ಸವ ಬೀದಿಗಳಲ್ಲೂ ಉತ್ಸವ ನಡೆಸಲಾಯಿತು. ಅಂತಿಮವಾಗಿ 1.30ಕ್ಕೆ ಮುಕ್ತಾಯವಾಯಿತು, ನಂತರ ವಾಹನೋತ್ಸವ ಮಂಟಪದಲ್ಲೇ ಉತ್ಸವ ನಿಲ್ಲಿಸಿ ಅರ್ಧಗಂಟೆ ವೈರಮುಡಿ ಉತ್ಸವ ದರ್ಶನ ಮಾಡಿಸಲಾಯಿತು.

ಈ ವರ್ಷ ಪ್ರತಿವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷಾಂತರ ಭಕ್ತರು ನೆರೆದಿದ್ದರು. ಮೇಲುಕೋಟೆಯಿಂದ ಜಕ್ಕನಹಳ್ಳಿಯವರೆಗೆ 7 ರಿಂದ 8 ಕಿಮೀವರೆಗೆ ರಾತ್ರಿ 1 ಗಂಟೆಯಿಂದ 3 ಗಂಟೆವರೆಗೆ ಟ್ರಾಪಿಕ್ ಜಾಮ್ ಆಗಿತ್ತು. ವೈರಮುಡಿಗೆ ಲಕ್ಷ್ಮೀಜನಾರ್ದನಸ್ವಾಮಿ ಸನ್ನಿಧಿಯಲ್ಲಿ ಪೂಜೆ

ಮಂಡ್ಯ: ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದಲ್ಲಿ ವಿಶ್ವಕರ್ಮ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಅವರು, ನಮ್ಮ ಕುಲಬಾಂಧವರು ತುಂಬಾ ಆಸಕ್ತಿಯಿಂದ ಮೇಲುಕೋಟೆಯ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತದಲ್ಲಿ ಚಿನ್ನದ ಕೆಲಸಗಾರರಿಗೆ ಚಿನ್ನ ಬೆಲೆ ಹೆಚ್ಚಳದಿಂದ ಸ್ವಲ್ಪ ಹಿನ್ನಡೆಯಾಗಿದೆ. ನಮ್ಮ ಕುಲಕಸುಬಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಮಗ್ರವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವಂತಹ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದರು.

ಈ ವೇಳೆ ತಿರುಮಲಾಚಾರ್‌, ಪೇಟೆಬೀದಿ ಸೋಮು, ಆನಂದ್‌, ಶಂಕರ್‌, ರಾಮಕೃಷ್ಣ ಭಾಗವಹಿಸಿದ್ದರು.ದೇವಾಲಯದಲ್ಲಿ ವೈರಮುಡಿಗೆ ಪೂಜೆಮಂಡ್ಯ: ನಗರದ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದಲ್ಲಿ ಚಲುವರಾಯಸ್ವಾಮಿ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ತಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಸಮಾಜ ಸೇವಕ ಯೋಗಾನಂದ್‌, ಮುಖಂಡರಾದ ಶಿವನಂಜು, ಹೊನ್ನಪ್ಪ, ಪೇಟೆಬೀದಿ ಸೋಮು, ರಾಮಕೃಷ್ಣ ಭಾಗವಹಿಸಿದ್ದರು.